ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿರುವ ಟ್ರಂಪ್‌ಗೆ ಭಾರತದ ಪರಿಸರವಾದಿಗಳ ತರಾಟೆ

Update: 2017-06-02 13:44 GMT

ಹೊಸದಿಲ್ಲಿ,ಜೂ.2: ಹವಾಮಾನ ಕುರಿತ ಪ್ಯಾರಿಸ್ ಒಪ್ಪಂದದಿಂದ ಹೊರಬೀಳುವ ನಿರ್ಧಾರಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತರಾಟೆಗೆತ್ತಿಕೊಂಡಿರುವ ಭಾರತೀಯ ಪರಿಸರವಾದಿಗಳು, ಈ ನಿರ್ಧಾರವು ಒಪ್ಪಂದದ ಪಾಲಿಗೆ ಮರಣ ಮೃದಂಗವಾಗಲಿದೆ ಎಂದು ಹೇಳಿದ್ದಾರೆ. ಅವರ ಪೈಕಿ ಕೆಲವರು ಅಮೆರಿಕದ ಈ ನಡೆಯು ಹವಾಮಾನ ಕುರಿತಂತೆ ಜಾಗತಿಕ ನಾಯಕತ್ವವನ್ನು ನೀಡಲು ಭಾರತಕ್ಕೆ ಅವಕಾಶ ವೊಂದನ್ನು ಕಲ್ಪಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಅಂತರರಾಷ್ಟ್ರೀಯ ಹವಾಮಾನ ಒಪ್ಪಂದದಿಂದ ಅಮೆರಿಕವು ಹೊರಬೀಳುತ್ತಿರುವುದು ಇದೇ ಮೊದಲ ಬಾರಿಯಲ್ಲ, ಅದು ಕ್ಯೋಟೊ ಶಿಷ್ಟಾಚಾರದಿಂದಲೂ ಹೊರಬಿದ್ದಿತ್ತು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಶುಕ್ರವಾರ ಹೇಳಿದೆ.
ಹಸಿರು ಮನೆ ಅನಿಲಗಳನ್ನು ಹೊರಸೂಸುವಲ್ಲಿ ಐತಿಹಾಸಿಕವಾಗಿ ಅಗ್ರಸ್ಥಾನದಲ್ಲಿದ್ದ ಅಮೆರಿಕ ಈಗಲೂ ಇಂಗಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತಿರುವ ಪ್ರಮುಖ ರಾಷ್ಟ್ರಗಳಲ್ಲೊಂದಾಗಿದೆ ಎಂದಿರುವ ಅದು, ಅಮೆರಿಕದ ಸಕ್ರಿಯ ಕೊಡುಗೆಯಿಲ್ಲದೆ ಹವಾಮಾನ ಬದಲಾವಣೆ ವಿರುದ್ಧದ ಯಾವುದೇ ಹೋರಾಟಕ್ಕೆ ಬಲ ಬರುವುದಿಲ್ಲ ಎಂದು ಹೇಳಿದೆ.

ಟ್ರಂಪ್ ನಿರ್ಧಾರವನ್ನು ಹೊಣೆಗೇಡಿತನದ್ದು ಮತ್ತು ಸಂಕುಚಿತ ದೃಷ್ಟಿಯದ್ದು ಎಂದು ಬಣ್ಣಿಸಿರುವ ಗ್ರೀನ್ ಪೀಸ್ ಇಂಡಿಯಾ, ಅದು ಹಲವು ರೀತಿಗಳಲ್ಲಿ ಅಮೆರಿಕಕ್ಕೆ ನಷ್ಟವನ್ನುಂಟು ಮಾಡಲಿದೆ ಮತ್ತು ಹವಾಮಾನ ಬದಲಾವಣೆ ವಿಷಯದಲ್ಲಿ ವಿಶ್ವಕ್ಕೆ ನಾಯಕತ್ವ ನೀಡುವ ಅವಕಾಶವನ್ನು ಭಾರತಕ್ಕೆ ಒದಗಿಸಲಿದೆ ಎಂದಿದೆ.

ಪ್ಯಾರಿಸ್ ಒಪ್ಪಂದಕ್ಕೆ 190ಕ್ಕೂ ಅಧಿಕ ದೇಶಗಳು ಸಹಿ ಹಾಕಿದ್ದು, ಇದು ಭಾರತ ಮತ್ತು ಚೀನಾದಂತಹ ದೇಶಗಳಿಗೆ ಅನುಚಿತ ಲಾಭವನ್ನು ನೀಡಲಿದೆ ಎಂದು ಗುರುವಾರ ಹೇಳಿದ ಟ್ರಂಪ್, ಅಮೆರಿಕವು ಈ ಒಪ್ಪಂದದಿಂದ ಹಿಂದೆ ಸರಿಯುತ್ತಿದೆ ಎಂದು ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News