ದೇವರ ಮೇಲೆ ನಂಬಿಕೆಯಿರಲಿ; ಮೂಢನಂಬಿಕೆ ಅಲ್ಲ: ಮುರುಘಾ ಶ್ರೀ
ಚಿತ್ರದುರ್ಗ, ಜೂ.2: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವವನ್ನು ಅನುಸರಿಸು ತ್ತಿದ್ದರಿಂದ ವಚನ ಚಳವಳಿಯು ಯಶಸ್ಸನ್ನು ಪಡೆಯಿತು. ಅಲ್ಲಿ ಸಂಗ್ರಹಿಸುವ ಪ್ರವೃತ್ತಿಗೆ ಅವಕಾಶ ಇರಲಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
ಕೇರಳ ರಾಜ್ಯದ ಗುರುವಾಯೂರಿನಲ್ಲಿ ಬಸವಕೇಂದ್ರ ಮುರುಘಾಮಠ ಮತ್ತು ಬಸವಕೇಂದ್ರ ಕೇರಳ ರಾಜ್ಯ ಇವುಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಏಕತಾ ಶರಣಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರ ಸುತ್ತ ಅನೇಕ ಬಗೆಯ ಆಚರಣೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಮೂಢನಂಬಿಕೆಗಳು. ಬದುಕಿನಲ್ಲಿ ನಂಬಿಕೆ ಇರಲಿ. ಆದರೆ ಮೂಢನಂಬಿಕೆ ಇರಬಾರದು. ಧರ್ಮದ ಸುತ್ತಲೂ ಕೆಲವೊಂದು ಕಟ್ಟುಪಾಡುಗಳು ಅರ್ಥಾತ್ ಕಟ್ಟಳೆಗಳು. ದೇವರ ಮೇಲೆ ನಂಬಿಕೆ ಇರಲಿ; ಮೂಢನಂಬಿಕೆ ಇರಬಾರದು. ಜನರು ಅವರವರ ಧರ್ಮವನ್ನು ಆಚರಿಸಲಿ.
ಆದರೆ ಕಠಿಣತರವಾದ ಕಟ್ಟುಪಾಡುಗಳನ್ನು ಆಚರಿಸಬಾರದು. ಈ ನಿಟ್ಟಿನಲ್ಲಿ ಬಸವಣ್ಣನವರು ಮತ್ತವರ ಸಮಕಾಲೀನ ಶರಣರು ಸಮಾಜದಲ್ಲಿ ಬೇರುಬಿಟ್ಟಿದ್ದ ಹಲವಾರು ಮೂಢನಂಬಿಕೆಗಳನ್ನು ಖಂಡಿಸಿದರು.
ವಿಜ್ಞಾನಿಗಳದ್ದು ವೈಜ್ಞ್ಞಾನಿಕ ಸಾಧನೆ. ಹೊಸಹೊಸ ಅನ್ವೇಷಣೆ ಮಾಡುತ್ತಲೇ ಇರುತ್ತಾರೆ. ಅವರದು ವೈಜ್ಞಾನಿಕ ಸಾಹಸ. ತಂತ್ರಜ್ಞಾನದಲ್ಲಿ ಹೆಚ್ಚಿನ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಕ್ರೀಡಾಕ್ಷೇತ್ರ, ಕೃಷಿಕ್ಷೇತ್ರ, ಶೈಕ್ಷಣಿಕ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ನಡೆಯುತ್ತವೆ. ಸತ್ಪುರುಷರದು ಸಾಮಾಜಿಕವಾದ ಸಾಧನೆ.
ಸಮಾಜದಲ್ಲಿ ಅಡಗಿರುವ ಉಚ್ಛ-ನೀಚ ಭಾವನೆಗಳನ್ನು ಕಿತ್ತೊಗೆಯಲು ಸದಾ ಶ್ರಮಿಸುತ್ತಾರೆ. ಲಿಂಗ ತಾರತಮ್ಯ ಮತ್ತು ಅಲಕ್ಷಿತರಿಗೆ ಸಮಾನತೆ ಕೊಡಮಾಡದ ಶಾಸ್ತ್ರಗಳನ್ನು ಪ್ರಶ್ನಿಸುತ್ತಾರೆ ಮತ್ತು ಟೀಕಿಸುತ್ತಾರೆ. ಇಂಥ ಪ್ರಶ್ನೆಗಳನ್ನು ಎತ್ತುವುದರ ಮೂಲಕ ಬಸವಣ್ಣನವರು ಮುಕ್ತ ವಿಚಾರವಾದಿ ಎನಿಸಿಕೊಂಡಿದ್ದಾರೆ ಎಂದರು.
ಅನೇಕರು ದೇವರನ್ನು ಬಹಿರಂಗದಲ್ಲಿ ಹುಡುಕುತ್ತಾರೆ. ಆದರೆ ಪ್ರಾಜ್ಞರು ತತ್ವವೇತ್ತರು ಮತ್ತು ಸಮಾಜ ಸುಧಾರಕರು ದೇವರನ್ನು ತಮ್ಮಾಳಗೆ ಹುಡುಕುತ್ತಾರೆ. ಉಳ್ಳವರು ದೊಡ್ಡದೊಡ್ಡ ದೇವಸ್ಥಾನವನ್ನು ಕಟ್ಟುತ್ತಾರೆ.
ದೇವಸ್ಥಾನಗಳಲ್ಲಿ ಕೆಳವರ್ಗದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಂಥ ಸಂದರ್ಭದಲ್ಲಿ ಶರಣ ಚಳವಳಿಯು ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸುವ ಪದ್ಧತಿಗೆ ಮಹತ್ವ ನೀಡಿತು ಎಂದರು.
ಗುರುವಾಯೂರು ಮಾಜಿ ಶಾಸಕ ಟಿ.ವಿ. ಚಂದ್ರಮೋಹನ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ಕೇರಳ ಬಸವಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ವಿಜಯನ್ ಮತ್ತು ಕೇರಳ ಬಸವಕೇಂದ್ರ ಅಧ್ಯಕ್ಷ ಪ್ರಸನ್ನಕುಮಾರ್ ವೇದಿಕೆಯಲ್ಲಿದ್ದರು.
ರಾವಂದೂರು ಮುರುಘಾಮಠದ ಮೋಕ್ಷಪತಿ ಮಹಾಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಮರುಳಸಿದ್ಧ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.
ಪ್ರಸನ್ನಕುಮಾರ್ ಸ್ವಾಗತಿಸಿದರು. ಕೊಪ್ಪಳದ ಸಿದ್ಧ ಲಿಂಗ ದೇವರು ನಿರೂಪಿಸಿದರು. ಪ್ರಿಯದರ್ಶಿನಿ ಸಾಣಿಕೊಪ್ಪವಂದಿಸಿದರು.