×
Ad

'ಜಾನುವಾರು ಮಾರಾಟ ನಿಷೇಧ ರೈರತ ಮೇಲೆ ದಾಳಿ ಮಾಡುವ ಕರಾಳ ಕಾನೂನು'

Update: 2017-06-03 16:22 IST

ಹಾಸನ, ಜೂ.3: ಕೇಂದ್ರ ಸರಕಾರದ ಪರಿಸರ ಹಾಗೂ ಅರಣ್ಯ ಮಂತ್ರಾಲಯ ಈಚೆಗೆ ಪ್ರಕಟಿಸಿದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ನಿಯಮಾವಳಿಯು, ವಧೆಗಾಗಿ ಜಾನುವಾರುಗಳ ಮಾರಾಟವನ್ನು ನಿಷೇಧಿಸಿದೆಎಂದು ಹೇಳಲಾದ ಜಾನುವಾರುಗಳಲ್ಲಿ ಗೂಳಿ, ಹೋರಿ, ಎತ್ತು, ಹಸು, ಎಮ್ಮೆ, ಕೋಣ, ಒಂಟೆ, ಕರುಗಳನ್ನು ಸೇರಿಸಲಾಗಿದೆ. ಇದೊಂದು ಕರಾಳ ನಿಯಮಾವಳಿಯಾಗಿದ್ದು ದೇಶದ ಸಂವಿಧಾನ ವಿರೋಧಿಯಾಗಿದೆ.

ಇದರಿಂದ ವ್ಯವಸಾಯ, ಹೈನುಗಾರಿಕೆ, ಹಾಗೂ ಮಾಂಸ ಹಾಗೂ ಚರ್ಮಕ್ಕೆ ಸಂಬಂಧಿಸಿದ ಎಲ್ಲ ದೇಶೀಯ ಉದ್ದಿಮೆಗಳನ್ನು ನಾಶ ಮಾಡಲಿದೆ ಮತ್ತು ಜನತೆಯ ಆಹಾರದ ಮತ್ತು ಸ್ವಾತಂತ್ರ ಹಾಗೂ ಸ್ವಾವಲಂಬನೆಯ ಬದುಕುವ ಹಕ್ಕಿನ ಮೇಲೆ, ಅದೇ ರೀತಿ, ಜಾನುವಾರು ಸಂತತಿಯ ಮೇಲೆ ನಡೆಸಲಾದ ದೊಡ್ಡ ದಾಳಿ ಇದಾಗಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ ಮತ್ತು ತಕ್ಷಣವೇ ಕೇಂದ್ರ ಸರಕಾರ ಅದನ್ನು ವಾಪಾಸು ಪಡೆಯ ಬೇಕೆಂದು ಒತ್ತಾಯಿಸುತ್ತದೆ.

    ಇದು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಮತ್ತು ಬಿಜೆಪಿಯ ಕೇಳಿಕೆಯಾಗಿತ್ತು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಬಯಕೆಯೂ ಆಗಿತ್ತು.
    ಈಗಾಗಲೇ ತೀವ್ರ ಸಂಕಷ್ಟ ಹಾಗೂ ಬಿಕ್ಕಟ್ಟಿನಲ್ಲಿರುವ ದೇಶದ ಹಾಗೂ ರಾಜ್ಯದ ವ್ಯವಸಾಯ ಮತ್ತು ರೈತರು, ಕೂಲಿಕಾರರು, ಕಸುಬುದಾರರು ಇದರಿಂದಾಗಿ ಮತ್ತಷ್ಟು ತೀವ್ರ ಸಂಕಷ್ಟವನ್ನೆದುರಿಸುವಂತಾಗುತ್ತದೆ. ಇದು ಇವರಿಗೆ ಗಾಯದ ಮೇಲೆ ದೊಡ್ಡ ಬರೆ ಎಳೆದಂತಹ ಪರಿಸ್ಥಿತಿಯನ್ನು ನಿರ್ಮಿಸಲಿದೆ.

ಯಾವ ನಿರುಪಯುಕ್ತ ದನಗಳನ್ನು ಆಗಿಂದಾಗ್ಗೆ ಮಾರಾಟ ಮಾಡಿ ಅದರಿಂದ ಸ್ವಲ್ಪ ಆದಾಯವನ್ನು ಗಳಿಸಲಾಗುತ್ತಿತ್ತೋ, ಅದನ್ನು ಈ ಬಿಗಿಯಾದ ಮಾರಾಟ ನಿಯಮಾವಳಿಗಳ ಕಾರಣದಿಂದಾಗಿ ಕಳೆದುಕೊಳ್ಳಬೇಕಾಗುತ್ತದೆ. ಮಾತ್ರವಲ್ಲಾ, ನಿರುಪಯೋಗಿ ಈ ಜಾನುವಾರುಗಳನ್ನು ಅವುಗಳ ಸಾವಿನವರೆಗೆ ಸಾಕಲೇ ಬೇಕಾದ ಒತ್ತಾಯಕ್ಕೊಳಗಾಗಿ ಅದರ ಜೀವಮಾನದ ಖರ್ಚನ್ನು ಭರಿಸಬೇಕಾಗುತ್ತದೆ. ಇಲ್ಲವೇ ಅವುಗಳನ್ನು ಬೀದಿಗೆ ಬಿಡಬೇಕಾಗುತ್ತದೆ. ಹಾಗೆ ಬಿಟ್ಟಾಗಲೂ ಈ ಬೀದಿ ಜಾನುವಾರುಗಳಿಂದ ಅವರು ಬೆಳೆಗಳ ಮೇಲಿನ ದಾಳಿಯನ್ನು ಅನುಭವಿಸಬೇಕಾಗುತ್ತದೆ.


     ಈ ಹೊರೆಯು, ವ್ಯವಸಾಯದಲ್ಲಿ ಎತ್ತುಗಳ ಬಳಸುವಿಕೆಯನ್ನು ನಿಲ್ಲಿಸಿ, ದುಬಾರಿ ಬಾಡಿಗೆಯ ಯಂತ್ರಗಳನ್ನು ನೀಡುವ ಬಂಡವಾಳಶಾಹಿ-ಭೂಮಾಲಕನ ಮೇಲೆ ಬಡ ಮತ್ತು ಮದ್ಯಮ ರೈತರನ್ನು ಮತ್ತಷ್ಟು ಅವಲಂಬಿಸುವಂತೆ ಒತ್ತಾಯಿಸಲಿದೆ. ಇದೆಲ್ಲವೂ ಖಂಡಿತಾ ಬೇಸಾಯಗಾರನನ್ನು ಮತ್ತು ಹೈನುಗಾರರನ್ನು ವ್ಯವಸಾಯ ಹಾಗೂ ಹೈನುಗಾರಿಕೆಯಿಂದ ಹೊರತಳ್ಳುತ್ತದೆ.


    ಅದೇ ರೀತಿ, ವ್ಯವಸಾಯ ಹಾಗೂ ಹೈನುಗಾರಿಕೆಯ ಆಧಾರಿತ ಉದ್ದಿಮೆಗಳು ಈ ಮೇಲಿನ ಕಾರಣದಿಂದಾಗಿ, ಅವುಗಳಿಗೆ ಅಗತ್ಯವಾದ ಕಚ್ಚಾಮಾಲುಗಳ ಕೊರತೆಯಿಂದ ಮುಚ್ಚಲ್ಪಡಲಿವೆ ಹಾಗೂ ಅದಾಗಲೆ ಉದ್ಯೋಗಿಗಳಾಗಿದ್ದವರನ್ನು ಬೀದಿಗೆ ತಳ್ಳಿ ನಿರುದ್ಯೋಗಿಗಳ ದೊಡ್ಡ ಪಡೆಯನ್ನು ನಿರ್ಮಿಸಲಿವೆ. ಇದರಿಂದ ಗ್ರಾಹಕರಿಗೆ ಸ್ಥಳೀಯವಾಗಿ ಲಭ್ಯವಿದ್ದ ಅಗತ್ಯ ಆಹಾರ ಮತ್ತು ಹೈನುಗಾರಿಕೆಯ ಉತ್ಪನ್ನಗಳು ಮತ್ತು ಇವುಗಳ ಉದ್ದಿಮೆಯಾಧಾರಿತ ಉತ್ಪನ್ನಗಳು ಸಿಗದಂತಾಗಲಿವೆ.


    ಜಾಗತಿಕವಾಗಿ ಮಾಂಸ ರಫ್ತಿನಲ್ಲಿ ನಮ್ಮ ದೇಶ ಪ್ರಥಮ ಸ್ಥಾನವನ್ನು ಹೊಂದಿದೆ. ಈ ನಿಯಮದಿಂದಾಗಿ ಮಾಂಸದ ಕೊರತೆಯುಂಟಾಗಿ ಇಡೀ ಕೈಗಾರಿಕೆ ಮತ್ತು ಅದರಲ್ಲಿ ತೊಡಗಿದ್ದ ಭಾರೀ ಉದ್ಯೋಗವೂ ಇಲ್ಲದಂತಾಗುತ್ತದೆ. ಚರ್ಮೋದ್ಯಮವೂ ಅದರ ಉದ್ಯೋಗವು ನಾಶಗೊಳ್ಳಲಿದೆ. ಇದರಿಂದಾಗಿ ರೈತರು, ಕೂಲಿಕಾರರು, ಹಿಂದುಳಿದ ಜನಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳು, ಅಲ್ಪಸಂಖ್ಯಾತರು ತೀವ್ರ ಉದ್ಯೋಗ ಹಾನಿಗೆ ಒಳಗಾಗಲಿದ್ದಾರೆ.
     
    ನಮ್ಮ ಸ್ವಾವಲಂಬಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯದಂತೆ ಮಾಡುವ ಮತ್ತು ಈ ಎಲ್ಲಾ ಉತ್ಪನ್ನಗಳಿಗಾಗಿ ಬಹುರಾಷ್ಠ್ರೀಯ ಸಂಸ್ಥೆಗಳಿಗೆ ನಮ್ಮ ಮಾರುಕಟ್ಟೆಯನ್ನು ಒದಗಿಸುವ ಸಂಚು ಇದರ ಹಿಂದೆ ಅಡಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇಷ್ಟು ಮಾತ್ರವೇ ಅಲ್ಲಾ, ಈ ನಿಯಮಾವಳಿಯು ಪರೋಕ್ಷವಾಗಿ ದೇಶದ ದೊಡ್ಡ ಸಂಖ್ಯೆಯ ಜನಗಳ ಆಹಾರದ ಹಕ್ಕು ಮತ್ತು ಬದುಕುವ ಹಕ್ಕಿನ ಮೇಲೆ ನಡೆಸಿದ ದಾಳಿಯಾಗಿದೆ. ಸಂವಿಧಾನವು ಈ ವಿಷಯವನ್ನು ರಾಜ್ಯಗಳಿಗೆ ಸಂಬಂಧಿಸಿದ್ದೆಂದು ಸ್ಪಷ್ಟವಾಗಿ ಹೇಳಿದ್ದರೂ, ಕೇಂದ್ರ ಸರಕಾರ ಅದನ್ನು ದುರುದ್ದೇಶ ಪೂರ್ವಕವಾಗಿಯೇ ಉಲ್ಲಂಘಿಸಿ, ಈ ನಿಯಮಾವಳಿಗಳನ್ನು ರೂಪಿಸಿ ರಾಜ್ಯಗಳ ಮೇಲೆ ಹೇರಿದೆ.
    
      
    ಇದು ಒಂದೆಡೆ, ಅಪಾರ ಪ್ರಮಾಣದ ದುಡಿಯುವ ಜನತೆ ಹಾಗೂ ಗ್ರಾಮೀಣ ಪ್ರದೇಶದ ಮೂರು ಪ್ರಮುಖ ಮೂಲ ಉದ್ದಿಮೆಗಳಾದ ಬೇಸಾಯ ಮತ್ತು ಹೈನುಗಾರಿಕೆ, ಮಾಂಸಹಾರದ ಹಾಗೂ ಅವುಗಳನ್ನು ಆಧರಿಸಿದ ಇತರೇ ಉದ್ದಿಮೆಗಳ ಮೇಲೆ ದಾಳಿ ನಡೆಸಿ, ಈ ಸಂಬಂಧಿತ ಗ್ರಾಹಕ ಮಾರುಕಟ್ಟೆಯನ್ನು ಬಹುರಾಷ್ಠ್ರೀಯ ಸಂಸ್ಥೆಗಳಿಗೆ ಒದಗಿಸಿಕೊಡುವ ಹುನ್ನಾರವಾಗಿದ್ದರೆ, ಇನ್ನೊಂದೆಡೆ ಇದು ಈ ಎಲ್ಲಾ ರೀತಿಯ ಬದುಕನ್ನು ಕಳೆದುಕೊಳ್ಳುವವರು ತಮ್ಮ ಹಕ್ಕುಗಳಿಗಾಗಿ, ಒಗ್ಗೂಡಿ ಹೋರಾಡದಂತೆ ತಡೆಯುವ ಮತ್ತು ಪರಸ್ಪರರ ಮೇಲೆ ಮುಗಿಬಿದ್ದು ಹೊಡೆದಾಡಿಕೊಳ್ಳುವಂತೆ ಮಾಡುವ, ಒಡೆದಾಳಲು ಬಳಸುವ ಕೋಮುವಾದದ ಸಂಚಾಗಿದೆ.

ಬಿಜೆಪಿಯ ಕೇಂದ್ರ ಸರಕಾರ, ಜಾನುವಾರು ಸಂರಕ್ಷಣೆಯ ಹೆಸರೇಳಿ ಈ ನಿಯಮಾವಳಿಯನ್ನು ಜಾರಿಗೆ ತಂದರೆ, ದೇಶದ ಸಂಘ ಪರಿವಾರ ಇದನ್ನು ದೊಡ್ಡ ರೀತಿಯಲ್ಲಿ ಸ್ವಾಗತಿಸಿದೆ. 1992ರಲ್ಲಿ ಜಾನುವಾರುಗಳ ಸಂಖ್ಯೆ 28.90 ಕೋಟಿಯಷ್ಠಿದ್ದರೆ 2012ರಲ್ಲಿ ಅದು 30 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ 1992ರಲ್ಲಿ ಗೋವುಗಳ ಸಂಖ್ಯೆಯು 10.30 ಕೋಟಿ ಇದ್ದರೆ 2012ರಲ್ಲಿ ಅದು 12,30ಕೋಟಿಗೆ ಏರಿಕೆಯಾಗಿದೆ. ವಾಸ್ತವದಲ್ಲಿ ಜನತೆ ತನ್ನ ಉಪಯೋಗಕ್ಕಾಗಿ ಈ ಜಾನುವಾರುಗಳನ್ನು ಬಳಸುತ್ತಾ ಅದರ ಸಂತತಿಯನ್ನು ಹೆಚ್ಚು ಮಾಡುತ್ತಾ ಮುನ್ನಡೆದಿದೆ.

ಈಗ ಈ ನಿಯಮಾವಳಿಯಿಂದಾಗಿ, ಜನತೆ ಇದರ ಉಪಯೋಗವನ್ನು ಬಿಡಬೇಕಾದ ಪರಿಸ್ಥಿತಿ ಮುಂದುವರೆದರೆ ಜಾನುವಾರು ಸಂತತಿಯೇ ಅಪಾಯದಂಚಿಗೆ ಸರಿಯಲಿದೆ. ಅದಾಗಲೆ, ನಾವುಗಳು ಜನತೆಯು ಉಪಯೋಗಿಸಲಾಗದ ಕಾಡು ಪ್ರಾಣಿಗಳಾದ ಹುಲಿ, ಸಿಂಹ, ಕರಡಿ, ಅನೆಗಳನ್ನು ಕಾರಿಡಾರ್‌ಗಳ ಮೂಲಕ ಸಂರಕ್ಷಿಸಬೇಕಾಗಿ ಬಂದಿರುವುದನ್ನು ಸಕಾರಣವಾಗಿ ಗುರುತಿಸಬಹುದಾಗಿದೆ. ಇದೆಲ್ಲವೂ ಕೂಡಾ, ಬಿಜೆಪಿಗೆ ಮತ್ತು ಸಂಘ ಪರಿವಾರಕ್ಕೆ ಜಾನುವಾರು ಹಾಗೂ ಗೋಸಂರಕ್ಷಣೆಯ ನಿಜ ಕಾಳಜಿ ಇಲ್ಲವೆಂಬುದನ್ನು ಬಯಲುಗೊಳಿಸುತ್ತದೆ. ಮೇಲೆ ತಿಳಿಸಲಾದ ಅಂಕೆಸಂಖ್ಯೆಗಳು, ಗೋಹತ್ಯೆಯು ಅದರ ಸಂತತಿಗೆ ಮಾರಕವಾಗಿದೆಯೆಂಬ ಸಂಘ ಪರಿವಾರದ ಅಪಪ್ರಚಾರವು ಬೊಗಳೆಯಾಗಿದೆಯೆಂಬುದನ್ನು ಬಯಲುಗೊಳಿಸುತ್ತವೆ.


    ಅದೇ ರೀತಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಇದು ಚುನಾವಣೆಯ ವರ್ಷವಾಗಿರುವುದರಿಂದ ಈ ನಿಯಮಾವಳಿಗಳನ್ನು ವಿರೋಧಿಸಿದರೆ, ತಮ್ಮ ಪಕ್ಷಕ್ಕೆ ಮತ ಕಡಿಮೆಯಾಗಬಹುದೇನೋ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ಮೀನ-ಮೇಷ ಮಾಡುವುದನ್ನು ಕೈಬಿಟ್ಟು ಸ್ಪಷ್ಠವಾಗಿ ಅದನ್ನು ತಿರಸ್ಕರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸರಕಾರವನ್ನು ಮತ್ತು ಸಿದ್ಧರಾಮಯ್ಯನವರನ್ನು ಒತ್ತಾಯಿಸುತ್ತದೆ.

 ಸಭೆಯಲ್ಲಿ ಹಿರಿಯ ದಲಿತ ಮುಖಂಡರು ಮತ್ತು ಕೆಡಿಪಿ ಸದಸ್ಯರಾದ ನಾರಾಯಣದಾಸ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಕೊಟ್ಟೋರು ಶ್ರೀನಿವಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜಶೇಖರ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಚಲಂ ಹಾಡ್ಲಳ್ಳಿ, ಗ್ಯಾರೆಂಟಿ ರಾಮಣ್ಣ ಮುಂತಾದವರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಸಂತ್‌ಕುಮಾರ್ ಸ್ವಾಗತಿಸಿದರು. ಸಭೆಯ ಕೊನೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಾನುವಾರು ಹತ್ಯೆ ನಿಷೇಧದ ಕರಾಳ ಕಾನೂನಿನ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News