ಕಲ್ಲುಗಣಿಗಾರಿಕೆ ವಿರೋಧಿಸಿ ಗ್ರಾಮಸ್ಥರ ಧರಣಿ
ಬಾಗೇಪಲ್ಲಿ.ಜೂ,3 :ತಾಲೂಕಿನ ಗೂಳೂರು ಹೋಬಳಿ ಮಾಡಪಲ್ಲಿ ಗ್ರಾಮದ ಕೋರ್ಲಗುಡ್ಡೆ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಸ್ಥಳದಲ್ಲೇ ಗ್ರಾಮಸ್ಥರು ಧರಣಿ ನಡೆಸಿದರು.
ಈ ಬಗ್ಗೆ ಗ್ರಾಮಸ್ಥರು ಆರೋಪಿಸಿ ನಾವು ಐದಾರು ವರ್ಷಗಳಿಂದ ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದೇವೆ.ಈಗಾಗಲೇ ನಮ್ಮ ಹಳ್ಳಿಗಳ ಸುತ್ತಮುತ್ತಲು ಅನಾಧಿಕಾಲದಿಂದಲೂ ಇದ್ದ ಬೆಟ್ಟಗುಡ್ಡಗಳನ್ನು ಕೆಡವಿ ಈ ಬೆಟ್ಟದಲ್ಲಿರುವ ಕಲ್ಲುಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ.ಕುರಿ,ಮೇಕೆ,ಧನ,ಹಸುಗಳನ್ನು ಈ ಬೆಟ್ಟದಲ್ಲಿ ಮೇಯಿಸಿ ಜೀವನ ಸಾಗಿಸುತ್ತಿದ್ದೇವೆ.ನಮ್ಮ ಗ್ರಾಮದ ಪಕ್ಕದಲ್ಲೇ ಇರುವ ಈ ಬೆಟ್ಟದಲ್ಲೇ ಶ್ರೀಲಕ್ಷ್ಮೀನರಸಿಂಹಸ್ವಾಮಿ,ಶ್ರೀ ಗಂಗಮ್ಮ ದೇವಾಲಯಗಳಿದ್ದು ಪ್ರತಿ ವರ್ಷ ಜಾತ್ರೆಯನ್ನು ಆಚರಣೆ ಮಾಡಲಾಗುತ್ತಿದೆ.
ಅಧಿಕಾರಿಗಳು ಸಹ ಕಲ್ಲುಗಣಿಗಾರಿಕೆ ನಡೆಸುತ್ತಿರುವವರ ಜತೆ ಶಾಮೀಲಾಗಿ ದಂಧೆ ನಡೆಸುತ್ತಿದ್ದಾರೆ.ನಾವು ಹಲವಾರು ಬಾರಿ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲವಾಗಿದೆ.ಕ್ವಾರಿ ನಡೆಸುತ್ತಿರುವ ಜಾಗದಲ್ಲಿ ಜಾನುವಾರುಗಳ ಮೇಯುವ ಮೇವಿನ ಮೇಲೆ ಕಲ್ಲಿನ ಧೂಳು ತುಂಬುತ್ತಿದೆ ಎಂದು ಗ್ರಾಮಸ್ಥರಾದ ಶ್ರೀನಿವಾಸರೆಡ್ಡಿ,ಗಂಗುಲಮ್ಮ,ವಿಷ್ಣು,ಜಯಮ್ಮ ಲಕ್ಷ್ಮಮ್ಮ,ವೆಂಕಟೇಶ್,ಲಕ್ಷ್ಮೀನರಸಿಂಹಪ್ಪ,ಸೂರಿ ಮತ್ತಿತರರು ಆರೋಪಿಸಿದರು.
ಧರಣಿ ನಡೆಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಉಪ ನಿರೀಕ್ಷಕ ಎಸ್.ನರೇಶ್ ನಾಯ್ಕಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಧರಣಿಕಾರರೊಂದಿಗೆ ಮಾತುಕತೆ ನಡೆಸಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದ್ದರೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ಕಾನೂನು ಪ್ರಕಾರ ಗಣಿಗಾರಿಕೆ ನಡೆಸುತ್ತಿದ್ದರೆ ಏನು ಮಾಡಲು ಸಾದ್ಯವಿಲ್ಲ ಎಂದರು.ಅಲ್ಲದೇ ಮಾಡಪಲ್ಲಿ ಗ್ರಾಮದ ಬಳಿ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಹಾಗೂ ಎಷ್ಟು ಎಕರೆಗೆ ಗಣಿಗಾರಿಕೆ ನಡೆಸಲು ಮಂಜೂರಾತಿ ಸಿಕ್ಕಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಪೂರ್ಣ ವಿವರಗಳು ಬೇಕಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅವರನ್ನು ಕೇಳಿ ಎಂದರು.
ತಹಶೀಲ್ದಾರ್ ಆರ್.ಶೂಲದಯ್ಯಮಾತನಾಡಿ, ಮಾಡಪಲ್ಲಿ ಗ್ರಾಮದ ಬಳಿ ನಡೆಸುತ್ತಿರುವ ಗಣಿಗಾರಿಕೆ ಅಧಿಕೃತವಾಗಿದ್ದು, ಅನಧಿಕೃತವಾಗಿ ನಡೆಸುತ್ತಿಲ್ಲ ಎಂದು ತಿಳಿಸಿದರು.
ಕ್ವಾರಿ ಮಾಲೀಕ ಆರ್. ವೆಂಕಟೇಶ್ ಗೌಡ ಮಾತನಾಡಿ, 2010ರಲ್ಲೇ 8 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಿದ್ದವು. ಈಗ ಅದಕ್ಕೆ ಮಂಜೂರಾತಿ ಸಿಕ್ಕಿದ್ದು ಕಾನೂನು ಪ್ರಕಾರ ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೆ ಇದಕ್ಕೆ ಗ್ರಾಮಸ್ಥರು ಅಡ್ಡಿಪಡಿಸುತ್ತಿರುವುದು ಬೇಸರದ ಸಂಗತಿ.ನಮಗೆ ಈ ಬಗ್ಗೆ ತೊಂದರೆಯಾದರೆ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಹಿಂಜರಿಯುವುದಿಲ್ಲ. ನಾವು ಅನಧಿಕೃತವಾಗಿ ಗಣಿಗಾರಿಕೆ ನಡೆಸಿದರೆ ಯಾವುದೇ ಶಿಕ್ಷೆಗೆ ಬದ್ದರಾಗಿರುತ್ತೇವೆ. ಈ ಸ್ಥಳದಲ್ಲಿ ನಾವು ಕೆಲಸ ಮಾಡಲಿ ಬಿಡಲಿ ಒಂದು ಕಿಬಿಕ್ ಮೀಟರ್‌ಗೆ 1400 ರೂಗಳ ಹಣವನ್ನು ಸರಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ.ಇದೇ ರೀತಿಯಲ್ಲಿ ವರ್ಷಕ್ಕೆ 1900 ಕಿಬಿಕ್ ಮೀಟರ್ ಲಕ್ಷಾಂತರರೂಗಳ ಹಣ ಪಾವತಿಸಬೇಕಾಗುತ್ತದೆ ಎಂದರು.