ಕೆರೆಗಳ ಉಳಿವು ಮತ್ತು ಪುನರಜೀವನಕ್ಕೆ ಒತ್ತಾಯಿಸಿ ಸೈಕಲ್ ಜಾಥಾ
Update: 2017-06-04 17:34 IST
ತುಮಕೂರು.ಜೂ.4:ಸಿಜ್ಞಾ ಯುವ ಸಂವಾದ ಕೇಂದ್ರ,ಯುವಮುನ್ನಡೆ, ತುಮಕೂರು ವಿಜ್ಞಾನ ಕೇಂದ್ರ, ನೇಚರ್ ಕ್ಲಬ್ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪರಿಸರ ದಿನಾಚರಣೆಯನ್ನು ನಮ್ಮೂರ ಕೆರೆಗಳನ್ನು ಉಳಿಸಿ, ಪುನರ್ ಜೀವನಗೊಳಿಸಿ ಎಂಬ ಘೋಷ ವಾಕ್ಯದೊಂದಿಗೆ ಸೈಕಲ್ ಜಾಥಾ ನಡೆಸಿ ವಿಶೇಷವಾಗಿ ಆಚರಿಸಲಾಯಿತು. ಭಾನುವಾರು ಬೆಳಗ್ಗೆ 7.30 ಕ್ಕೆ ಮರಳೂರು ಕೆರೆಯಿಂದ ಆರಂಭವಾದ ಸೈಕಲ್ ಜಾಥಾವನ್ನು ಪರಿಸರವಾದಿ ಸಿ. ಯತಿರಾಜು ಚಾಲನೆಗೊಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪರಿಸರದ ಮೇಲಿನ ಆಕ್ರಮಣಗಳಿಂದ ಜೀವವೈವಿಧ್ಯದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.ಹಾಗಾಗಿ ತುಮಕೂರಿನ ಪ್ರತಿಯೊಬ್ಬ ನಾಗರೀಕರೂ ಮಾಲಿನ್ಯ ಮುಕ್ತ ಸ್ವಚ್ಛ ಹಸಿರು ತುಮಕೂರನ್ನಾಗಿ ಮಾಡಲು ಪಣ ತೊಡಬೇಕು.ಪರಿಸರದ ಜೊತೆಗಿನ ಬಾಂಧವ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವಂತಾ ಗಬೇಕು.ನಿತ್ಯವೂ ಪರಿಸರದ ದಿನವಾಗಬೇಕು. ನಮ್ಮ ದೇಹ, ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಡಬೇಕಾದರೇ ಇಡೀ ಪರಿಸರದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.ಅದಕ್ಕೆ ಪೂರಕವಾಗಿ ನಮ್ಮ ಸುತ್ತಲಿನ ಕೆರೆಗಳನ್ನು ಉಳಿಸಬೇಕು. ಅವುಗಳಲ್ಲಿ ನೀರು ನಿಲ್ಲುವಂತೆ ಮಾಡಬೇಕು. ಅಂತರ್ಜಲವನ್ನು ಹೆಚ್ಚಿಸಬೇಕು. ಇವುಗಳಿಂದ ಬರವನ್ನು ನಿಯಂತ್ರಿಸಲು ಮತ್ತು ಹಸಿರು ನಗರವನ್ನಾಗಿಸಲು ಸಾಧ್ಯವಾಗುತ್ತದೆ ಎಂದರು. ಸಿಜ್ಞಾ ಯುವ ಸಂವಾದ ಕೇಂದ್ರದ ಮಾರ್ಗದರ್ಶಕ ಜ್ಞಾನ ಸಿಂಧೂಸ್ವಾಮಿ ಮಾತನಾಡಿ,ನಮ್ಮ ಊರಿನ ಕೆರೆಗಳನ್ನು ಉಳಿಸುವ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತಿಮುಖ್ಯವಾಗಿರುತ್ತದೆ.ಎಲ್ಲಾ ಕೆರೆಗಳಲ್ಲಿ ಅನವಶ್ಯಕ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವ ವಾಸ್ತವ ಇದೆ. ಅಲ್ಲದೆ ಕೆರೆಗಳನ್ನು ಸೌಂದರ್ಯಗೊಳಿಸುವ ನೆಪದಲ್ಲಿ ಅದರ ನೈಜತೆಯನ್ನು ಕೆಡಿಸುವ ಪ್ರಯತ್ನವೂ ನಡೆಯುತ್ತಿದೆ. ಮರಳೂರು ಕೆರೆಯ ಒಳಗೆ ಚಿಕ್ಕ ಪುಟ್ಟ ಕಟ್ಟೆಗಳನ್ನು ಕಟ್ಟಲು ಶುರು ಮಾಡಿದ್ದಾರೆ. ಇದರ ಉಪಯೋಗದ ಬಗ್ಗೆ ಒಬ್ಬರೂ ಯೋಚಿಸುತ್ತಿಲ್ಲ.ಅರ್ಥವಿಲ್ಲದ ಯೋಜನೆಗಳಿಂದ ಹಣ ವ್ಯಯವಾಗುತ್ತಿದೆ ಎಂಬುದಾಗಿ ನುಡಿದರು. ನೇಚರ್ ಕ್ಲಬ್ ಕಾರ್ಯಕರ್ತ ನಿತೀಶ್ ಮಾತನಾಡಿ,ಪರಿಸರ ದಿನಾಚರಣೆಯ ಪ್ರಯುಕ್ತ ಸಿಜ್ಞಾನದ ಒಡನಾಡಿಯಾಗಿ ಸೀಡ್‌ಬಾಲ್ ಚಟುವಟಿಕೆ, ಶಾಲಾ, ಕಾಲೇಜು, ಸಾರ್ವಜನಿಕರನ್ನು ಒಳಗೊಳ್ಳಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಕೆರೆಗಳ ಸಂರಕ್ಷಣೆಯ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿಸಿದೆ.ಕೆರೆಗಳ ಕೆಲಸಗಳ ಜೊತೆಗೆ ಅಲ್ಲಿನ ಪರಿಸರವನ್ನು ಹಸಿರಾಗಿಸುವ ಮತ್ತು ಜೀವರಾಶಿಗಳ ಆಶ್ರಯಧಾಮವಾಗಿ ಮಾರ್ಪಾಟು ಮಾಡುವಂತಾಗಬೇಕು ಎಂದರು. ಮರಳೂರು ಕೆರೆಯಿಂದ ಆರಂಭವಾದ ಸೈಕಲ್ ಜಾಥಾವು, ಸಿದ್ಧಾರ್ಥ ಕಾಲೇಜು, ಟೌನ್‌ಹಾಲ್, ಎಂ.ಜಿ.ರಸ್ತೆ ಮಾರ್ಗದ ಮೂಲಕ ಪರಿಸರ ಹಾಡು ಮತ್ತು ಘೋಷಣೆಗಳನ್ನು ಕೂಗುತ್ತಾ, ಅಮಾನಿಕೆರೆಯನ್ನು ಪ್ರವೇಶಿಸಿತು.ನಮ್ಮ ಸುತ್ತಮುತ್ತಲ ಕೆರೆಗಳನ್ನು ಸಂರಕ್ಷಿಸುವ ಕುರಿತು ಸಾರ್ವಜನಿಕರು ಮತ್ತು ಯುವಜನರೊಟ್ಟಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಕೆ.ಪಿ.ಮಧುಸೂಧನ,ಮಧುಸೂಧನ್ ರಾವ್ ಹಾಗೂ ಯುವ ಮುನ್ನಡೆಯ ನಂದನ್,ಲಕ್ಷ್ಮಿಶ್ರೀ,ರಶ್ಮಿ,ಹರೀಶ್,ಚಂದನ್, ನಾಗಭೂಷಣ, ಸುಕೃತಿ, ಶಶಿಕುಮಾರ್, ಹರೀಶ್ ಬಾಬು, ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.