ರಾಜ್ಯ ಸರಕಾರದಿಂದ ಮರಳಿನ ಕೃತಕ ಅಭಾವ: ಎಂ.ಪಿ. ರೇಣುಕಾಚಾರ್ಯ
Update: 2017-06-04 18:45 IST
ಹೊನ್ನಾಳಿ. ಜೂ,4 :ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರಕಾರದ ಅವೈಜ್ಞಾನಿಕ ಮರಳು ನೀತಿಯಿಂದ ಸಾಮಾನ್ಯ ಜನರು ಮನೆಗಳನ್ನು ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡದಂತಹ ಪರಿಸ್ಥಿತಿ ಬಂದೊದಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದೂರಿದರು. ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ ಅನೇಕ ಹಳ್ಳಿಗಳ ಮತ್ತು ಪಟ್ಟಣದ ಸಮೀಪ ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ಹೊನ್ನಾಳಿ ತಾಲೂಕು ಮರಳು ಕಣಜವಾಗಿದ್ದು ನಮ್ಮ ತಾಲೂಕಿನ ಜನತೆಗೆ ಮರಳು ಸಿಗುತ್ತಿಲ್ಲ ಎದಕ್ಕೆ ಸರಕಾರ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನೇರ ಹೊಣೆ ಎಂದು ಆರೋಪಿಸಿದ ಅವರು, ಮರಳಿನ ಅವೈಜ್ಞಾನಿಕ ನೀತಿಯನ್ನು ವಿರೋಧಿಸಿ ಕಳೆದ ನಾಲ್ಕು ವರ್ಷಗಳಲ್ಲಿ ಎಸಿ, ಡಿಸಿ ಕಚೇರಿಗಳ ಮುತ್ತಿಗೆ, ಧರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡ ಪರಿಣಾಮ ಇಂದು ಜಿಲ್ಲಾಧಿಕಾರಿ ಟೆಂಡರ್‌ಗೆ ಮೊರೆ ಹೋಗಿದ್ದಾರೆ ಎಂದು ಹೇಳಿದರು. ನಮ್ಮ ಮರಳು ನಮಗೆ ಬೇಕು. ಮರಳಿನ ಕೃತಕ ಅಭಾವದಿಂದ ಬಡ ಬಗ್ಗರು ಮನೆ ಕಟ್ಟಿಕೊಳ್ಳದ ಸ್ಥಿತಿ ತಲುಪಿದ್ದಾರೆ. ಇದಕ್ಕೆ ತಾಲೂಕು ಆಡಳಿತವೇ ಕಾರಣ ಎಂದು ಹೇಳಿದರು. ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ದಿಡಗೂರು ಪಾಲಾಕ್ಷಪ್ಪ, ಕುಮಾರಸ್ವಾಮಿ, ಕರಿಬಸಪ್ಪ ಇದ್ದರು.