×
Ad

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಪ್ರಮುಖ: ನಾಗರಾಜ್ ಆರ್. ಸಿಂಗ್ರೇರ್

Update: 2017-06-04 19:36 IST
ಸಾಗರ. ಜೂ,4 : ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್ ತಿಳಿಸಿದರು. ಇಲ್ಲಿನ ಗೋಪಾಲಗೌಡ ಕ್ರೀಡಾಂಗಣದಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ಮಾನಸಿಕವಾಗಿ ಸಿದ್ದಗೊಳ್ಳಲು ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಾಗತ್ಯ. ಸಮಾಜದ ಕಣ್ಗಾವಲಿನಲ್ಲಿರುವ ಪತ್ರಕರ್ತರು ತಮ್ಮ ವೈಯಕ್ತಿಕ ಬದುಕನ್ನು ಮರೆತು ಸುದ್ದಿ ಪ್ರಪಂಚದಲ್ಲಿ ಮುಳುಗಿರುತ್ತಾರೆ. ಪತ್ರಕರ್ತರು ಕ್ರೀಡಾಕೂಟದಂತಹ ಕಾರ್ಯಕ್ರಮವನ್ನು ನಡೆಸಿ, ಎಲ್ಲರನ್ನೂ ಒಳಗೊಳ್ಳುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ತಿಳಿಸಿದರು. ನಾವು ಅಧಿಕಾರಿಗಳು ಕೆಲಸ ಮಾಡುವ ಸಂದರ್ಭದಲ್ಲಿ ಅನೇಕ ಸವಾಲು ಎದುರಿಸುತ್ತೇವೆ. ಹಾಗೆಯೆ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಪರಸ್ಪರ ಸಾಮರಸ್ಯ ಬೆಳೆಸಲು ಇಂತಹ ಕ್ರೀಡಾಕೂಟಗಳ ಆಯೋಜನೆ ಅಗತ್ಯ. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಡಿವೈಎಸ್ಪಿ ಮಂಜುನಾಥ ಬಿ. ಕವರಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಅತೀ ಸೂಕ್ಷ್ಮ ವಲಯವಾಗಿದೆ. ಪತ್ರಕರ್ತರು ನಿರಂತರ ಚಟುವಟಿಕೆಯಲ್ಲಿ ಇದ್ದಾಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರದಂತಹ ಚಟುವಟಿಕೆಗಳು ನಡೆಯುವುದಿಲ್ಲ. ಸಾಗರದಲ್ಲಿ ಪತ್ರಕರ್ತರು ಕೇವಲ ಸುದ್ದಿ ಮಾಡಲಿಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ತೊಡಗಿಕೊಂಡಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಪತ್ರಕರ್ತರಿಗೆ ಚಿಕಿತ್ಸಕಾ ದೃಷ್ಟಿ ಇರಬೇಕು. ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ಹಿಂದಿನ ತನ್ನ ಶ್ರೇಷ್ಟತೆಯನ್ನು ಕಳೆದುಕೊಳ್ಳುತ್ತಿದೆ. ಅನೇಕ ಸಂದರ್ಭದಲ್ಲಿ ನಾವು ಮಾಡುವ ಸುದ್ದಿ ಕೆಲವರಿಗೆ ಬೇಸರ ಉಂಟು ಮಾಡುತ್ತದೆ. ನಮ್ಮ ಸುದ್ದಿಯ ಹಿಂದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಪ್ರಮುಖ ಉದ್ದೇಶವಿರುತ್ತದೆ ಎಂದರು. ವೇದಿಕೆಯಲ್ಲಿ ತಹಶೀಲ್ದಾರ್ ತುಷಾರ್ ಬಿ. ಹೊಸೂರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೂರಾಲಿ ಖಾನ್, ನಗರಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಲ್.ಜನಾರ್ಧನ್, ನಗರಸಭಾ ಸದಸ್ಯ ತೀ.ನ.ಶ್ರೀನಿವಾಸ್, ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಹಿತಕರ ಜೈನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News