ಪತ್ಯೇಕ ಅಪಘಾತ ಪ್ರಕರಣ: ಇಬ್ಬರು ಮೃತ್ಯು; ಐದು ಮಂದಿಗೆ ಗಾಯ
Update: 2017-06-04 20:01 IST
ಮಂಡ್ಯ, ಜೂ.4: ಜಿಲ್ಲೆಯಲ್ಲಿ ರವಿವಾರ ನಡೆದಿರುವ ಮೂರು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮದ್ದೂರು ತಾಲೂಕು ಬಿದರಕೋಟೆ ಗ್ರಾಮದ ನವೀನಮ್ಮ (42), ಮಳವಳ್ಳಿ ತಾಲೂಕು ಚಿಕ್ಕಬಾಗಿಲು ಗ್ರಾಮದ ಡಾ.ಜಿ.ಎಂ.ಪರಶಿವಪ್ಪ (39) ಅಪಘಾತದಲ್ಲಿ ಸಾವನ್ನಪ್ಪಿದವರು. ಮೈಸೂರು ಜಿಲ್ಲೆ ಕೂರ್ಗಹಳ್ಳಿಯ ಲಕ್ಷ್ಮಿ, ಗಾಯತ್ರಿ, ಸವಿತಾ, ಮಂಡ್ಯ ತಾಲೂಕು ಕಾರಸವಾಡಿಯ ಶಕುಂತಳಮ್ಮ ಹಾಗೂ ಮದ್ದೂರು ತಾಲೂಕು ಬಿದರಕೋಟೆಯ ಚಂದ್ರಶೇಖರ್ ಗಾಯಗೊಂಡಿವರು. ಮಂಡ್ಯ ತಾಲೂಕು ಬಿ.ಹೊಸೂರಿನಿಂದ ಮಂಡ್ಯದ ಕಡೆಗೆ ತಿರುವು ಪಡೆಯುತ್ತಿದ್ದ ದಂಪತಿಯ ಸ್ಕೂಟರ್‌ಗೆ ನಾಗಮಂಗಲ ಕಡೆಯಿಂದ ಬರುತ್ತಿದ್ದ ಕಾರು ಢಿಕ್ಕಿಯಾಗಿ ಬಿದರಕೋಟೆಯ ನವೀನಮ್ಮ ಸ್ಥಳದಲ್ಲೇ ಸಾವನ್ನಪ್ಪಿದರೆ, ಪತಿ ಚಂದ್ರಶೇಖರ್ ಗಾಯಗೊಂಡಿದ್ದಾರೆ. ಬೆಂಗಳೂರಿನ ಎನ್‌ಆರ್‌ಐ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಪರಶಿವಪ್ಪರ ಬೈಕ್‌ನಲ್ಲಿ ಮಳವಳ್ಳಿ ತಾಲೂಕಿನ ತನ್ನ ಗ್ರಾಮ ಚಿಕ್ಕಬಾಗಿಲುವಿಗೆ ತೆರಳುತ್ತಿದ್ದಾಗ ಕೆ.ಎಂ.ದೊಡ್ಡಿ ಸಮೀಪ ಮೆಳ್ಳಹಳ್ಳಿ ಬಳಿ ಸೇತುವೆಗೆ ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮಂಡ್ಯದ ಹೊರವಲಯದ ಕ್ಯಾತುಂಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರ ವಾಹನ ಪಲ್ಟಿಯಾಗಿ ಲಕ್ಷ್ಮಿ, ಗಾಯತ್ರಿ, ಸವಿತಾ ಹಾಗೂ ಶಕುಂತಳಮ್ಮ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಕಾರಸವಾಡಿಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಮಂಡ್ಯಕ್ಕೆ ಬರುತ್ತಿದ್ದಾಗ ಕ್ಯಾತುಂಗೆರೆ ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವುದನ್ನು ಕಂಡು ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು ಎಂದು ಪೊಲೀಸರು ತಿಳಿಸದ್ದಾರೆ. ಮೇಲಿನ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆರಗೋಡು, ಕೆ.ಎಂ.ದೊಡ್ಡಿ ಹಾಗೂ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.