ಉಪ್ಪಾರರ ಅಭಿವೃದ್ಧ್ದಿಗೆ ನಿಗಮ ಸ್ಥಾಪನೆ: ಸಚಿವ ಆಂಜನೇಯ
ಚಿತ್ರದುರ್ಗ, ಜೂ.4: ರಾಜ್ಯದಲ್ಲಿನ ಉಪ್ಪಾರರ ಅಭಿವೃದ್ಧ್ದಿಗಾಗಿ ನಿಗಮವನ್ನು ಸ್ಥಾಪಿಸುವ ಮೂಲಕ ಇವರ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ನಗರದ ಗುರುಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪ್ಪಾರ ಜನಾಂಗವು ಸಾಕಷ್ಟು ಹಿಂದುಳಿದಿದ್ದು, ಅಭಿವೃದ್ಧಿಗೆ ನಿಗಮವನ್ನು ಸ್ಥಾಪಿಸಬೇಕೆಂದು ಬೇಡಿಕೆ ಇದೆ.
ಸರಕಾರ ನಿಗಮ ಸ್ಥಾಪನೆ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮತ್ತು ಆರ್ಥಿಕಾಭಿವೃದ್ಧಿಗೆ ಸಾಲ, ಸೌಲಭ್ಯಗಳು ಹಾಗೂ ನೀರಾವರಿಗಾಗಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಸಹ ನೀಡಲಾಗುತ್ತದೆ. ಗಂಗೆಯನ್ನು ಧರೆಗೆ ತರಲು ಭಗೀರಥ ಮಹರ್ಷಿ ಯಾವ ರೀತಿ ತಪಸ್ಸು ಮಾಡಿದರು, ಅದೇ ರೀತಿ ಈ ಜನಾಂಗದ ಅಭಿವೃದ್ಧಿಗೆ ಮುಖ್ಯಮಂತ್ರಿಯವರು ಹೆಚ್ಚು ಉತ್ಸುಕರಾಗಿರಾಗಿದ್ದಾರೆ ಎಂದರು.
ಮಠದ ಅಭಿವೃದ್ಧ್ದಿಗೆ ಅನುದಾನದ ಜೊತೆಗೆ ಹಾಸ್ಟೆಲ್ ಸೌಲಭ್ಯವನ್ನು ನೀಡಲಾಗಿದೆ. ಇಲ್ಲಿನ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಸಮಾನತೆ ಬರಬೇಕಾದರೆ, ಸರಕಾರದಿಂದ ಇನ್ನು ಹೆಚ್ಚಿನ ಹಲವು ಸವಲತ್ತು ಹಾಗೂ ಸೌಕರ್ಯಗಳ ಅಗತ್ಯವಿದ್ದು, ಈಡೇರಿಕೆಗೆ ಮುಖ್ಯಮಂತ್ರಿ ಜೊತೆಗೆ ಜನಾಂಗದ ಮುಖಂಡರು ಚರ್ಚಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಭಗೀರಥ ವಂಶದವರಾದ ಉಪ್ಪಾರ ಜನಾಂಗ ಅತ್ಯಂತ ಹಿಂದುಳಿದ ಜಾತಿಗೆ ಸೇರಿದ್ದು, ಸಣ್ಣ ಪುಟ್ಟ ಹಿಡುವಳಿ ಭೂಮಿಯನ್ನು ಹೊಂದಿರುವ ಈ ಜನಾಂಗದಲ್ಲಿ ಹೆಚ್ಚು ಭೂಮಿ ಹೊಂದಿದವರು ತೀರಾ ವಿರಳವಾಗಿದ್ದಾರೆ.
ಇಂತಹ ಜನಾಂಗದ ಅಭಿವೃದ್ಧ್ದಿಗೆ ನಿಗಮವನ್ನು ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ನಿಗಮ ಸ್ಥಾಪನೆ ಮಾಡಿದರೆ ಸಾಲದು, ಹಣಕಾಸಿನ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕೆಂದರು. ರಾಜ್ಯದಲ್ಲಿನ 6 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನಾಂಗ ಸಣ್ಣಪುಟ್ಟ ಜಾತಿಯ ಹಿಂದುಳಿದ ವರ್ಗಗಳ ಜನಾಂಗ ಇದ್ದು, ಅದರಲ್ಲಿ ಉಪ್ಪಾರ, ನೇಕಾರ, ಮಡಿವಾಳ ಸೇರಿದಂತೆ ಅನೇಕ ಇಂತಹ ಜಾತಿಗಳು ಸೇರಿವೆ.
ಇವರ ಅಭಿವೃದ್ಧಿಗೆ ಇನ್ನಷ್ಟು ಮೀಸಲಾತಿ ಹೆಚ್ಚಿಸುವ ಬಗ್ಗೆ ಕೈಗೊಳ್ಳುವ ತೀರ್ಮಾನ ಸ್ವಾಗತಾರ್ಹವಾದದು ಎಂದರು. ಉಪನ್ಯಾಸ ನೀಡಿ ಮಾತನಾಡಿದ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ, ಭಗೀ ರಥ ಆದರ್ಶ ಪುರುಷನಾಗಿದ್ದು, ಸಗರ ವಂಶಸ್ಥನಾಗಿರುವನು. ಇವರ ವಂಶಸ್ಥರೇ ಉಪ್ಪಾರ ಜನಾಂಗದವರಾಗಿರುವರು. ಇಂತಹ ಪುರುಷರ ಜಯಂತಿಗಳನ್ನು ಆಚರಿಸುವುದು ಸಂಭ್ರಮಾಚರಣೆ, ಮನರಂಜನೆಗಲ್ಲ ಎಂದು ಹೇಳಿದರು.
ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರು ಹಾಗೂ ಕಿಯೋನಿಕ್ಸ್ ಸಂಸ್ಥೆ ಅಧ್ಯಕ್ಷ ಡಿ.ಸುಧಾಕರ್, ಶಾಸಕ ಬಿ.ಜಿ.ಗೋವಿಂದಪ್ಪ, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯ ವಿಶಾಲಾಕ್ಷಿ ನಟರಾಜ್, ನರಸಿಂಹರಾಜು, ತಾಪಂ ಅಧ್ಯಕ್ಷ ವೇಣಿಗೋಪಾಲ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಮುಖಂಡ ಕೆ.ಎಸ್.ನವೀನ್, ಉಪ್ಪಾರ ಸಮಾಜದ ಅಧ್ಯಕ್ಷ ಆರ್.ಮೂರ್ತಿ, ಕಾರ್ಯದರ್ಶಿ ಬಸವರಾಜ್, ಮೆದೇಹಳ್ಳಿ ಅಜ್ಜಪ್ಪ, ಹೊಸಳ್ಳಿ ತಿಪ್ಪೇಸ್ವಾಮಿ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು. ಗುರುಮೂರ್ತಿ ನಿರೂಪಿಸಿದರು. ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಸ್ವಾಗತಿಸಿದರು.
ಜಯಂತಿ ಅಂಗವಾಗಿ ಯೂನಿಯನ್ ಪಾರ್ಕ್ ಬಳಿಯಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ಮಹರ್ಷಿ ಭಗೀರಥ ಮಹರ್ಷಿಗಳ ಭಾವಚಿತ್ರ, ಮಹಿಳೆಯರಿಂದ ಪೂರ್ಣಕುಂಭಮೇಳ, ಕಲಾತಂಡಗಳೊಂದಿಗೆ ಮೆರವಣಿಗೆಯು ಗಾಂಧಿ ವೃತ್ತ, ಮುಖ್ಯರಸ್ತೆಯ ಮೂಲಕ ಗುರುಭವನ ತಲುಪಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಯಾವುದೇ ಜನಾಂಗ ಅಭಿವೃದ್ಧಿ ಹೊಂದಬೇಕಾದರೆ, ಅಂಧಕಾರ, ಅಜ್ಞಾನಹಾಗೂ ಬಡತನ ನಿವಾರಣೆಯಾಗಬೇಕು. ಈ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ ಸೂತ್ರವನ್ನು ಪಾಲಿಸಬೇಕಾಗಿದೆ. ಎಲ್ಲಿ ಸಮಾನ ಭಾವನೆ, ಸಮಾನತೆ ಹಾಗೂ ಆರ್ಥಿಕ, ರಾಜಕೀಯ ಸಮಾನತೆ ಇಲ್ಲವೋ ಅಂತಹ ಸಮಾಜ ಮುಂದೆ ಬರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. -ಎಚ್.ಬಿಲ್ಲಪ್ಪ ,ನಿವೃತ್ತ ನ್ಯಾಯಾಧೀಶ