ಸರಕಾರಿ ಶಾಲೆಗಳೇ ದೇಶದ ಭವಿಷ್ಯ

Update: 2017-06-05 04:37 GMT

ಮತ್ತೆ ಶಾಲೆಯ ಗಂಟೆ ಬಾರಿಸಿದೆ. ಕಾನ್ವೆಂಟ್‌ಗಳು ತಮ್ಮ ತಮ್ಮ ಅಂಕಗಳ ಹಿರಿಮೆಗಳನ್ನು ಎತ್ತಿ ಹಿಡಿದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುತ್ತಿವೆ. ಡೊನೇಶನ್ ಪಡೆಯಬಾರದು ಎಂಬ ಆದೇಶವಿದ್ದರೂ, ಅಕ್ರಮವಾಗಿ ಡೊನೇಶನ್‌ಗಳು ಸೂಟ್‌ಕೇಸ್ ತುಂಬಾ ಹರಿದಾಡುತ್ತಿವೆ. ಈ ನಡುವೆ ಸರಕಾರಿ ಶಾಲೆಗಳು ಎಂದಿನಂತೆಯೇ ನೀರಸ ಪ್ರದರ್ಶನ ತೋರಿಸುತ್ತಿವೆ. ಸರಕಾರ ವಿದ್ಯಾರ್ಥಿಗಳಿಗಾಗಿ ವಿವಿಧ ಯೋಜನೆಗಳನ್ನು ಘೋಷಿಸುತ್ತಲೇ ಇದ್ದರೂ ಅದು ವಿದ್ಯಾರ್ಥಿಗಳ ಪಾಲಕರ ಮೇಲೆ ವಿಶೇಷ ಪರಿಣಾಮಗಳೇನೂ ಬೀರುತ್ತಿಲ್ಲ.

ಖಾಸಗಿ ಶಾಲೆಗಳು ಮಧ್ಯಮವರ್ಗದ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿದರೆ, ನಾವು ನಮ್ಮ ಮಕ್ಕಳಿಗೇನೋ ಕೊರತೆಯನ್ನು ಎಸಗಿದ್ದೇವೆ ಎಂಬ ಕೀಳರಿಮೆ ಪೋಷಕರನ್ನು ಕಾಡತೊಡಗುತ್ತದೆ. ಸಾಮಾಜಿಕವಾಗಿ ಒಂದಿಷ್ಟು ಕೀಳಾಗಿ ಬಿಟ್ಟೆವೇನೋ ಎನ್ನುವಂತಹ ಅನಿಸಿಕೆ. ಇವುಗಳ ನಡುವೆ ಸರಕಾರಿ ಶಾಲೆಗಳು ಈಗಲೂ ಕೆಲವೆಡೆ ಮುಚ್ಚುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ‘ಮಕ್ಕಳೇ ಇಲ್ಲದ ಮೇಲೆ ಶಾಲೆಗಳು ಇರುವುದು ಹೇಗೆ?’ ಎಂಬ ಪ್ರಶ್ನೆಯನ್ನು ಸರಕಾರ ಕೇಳುತ್ತಿದೆ.

ಪ್ರಶ್ನೆಯೇನೋ ಸೂಕ್ತವಾದುದೇ ಆಗಿದೆ. ಆದರೆ ಆ ಪ್ರಶ್ನೆಯನ್ನು ಸರಕಾರ ತನಗೆ ತಾನೇ ಮತ್ತೊಮ್ಮೆ ಕೇಳಿಕೊಳ್ಳಬೇಕು. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುವುದಕ್ಕೆ ಕಾರಣವೇನು? ಸರಕಾರಿ ಶಾಲೆಗಳ ಮುಚ್ಚುಗಡೆ ಇಂದು ನಿನ್ನೆಯ ಸಮಸ್ಯೆಯಲ್ಲ್ಲ. ಒಂದು ದಶಕದ ಹಿಂದೆಯೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಇಳಿಕೆ ಆರಂಭವಾಗಿತ್ತು. ಆಗಲೇ ಒಂದು ಸಮೀಕ್ಷೆ ನಡೆಸಿ ಸರಕಾರಿ ಶಾಲೆಗಳಿಂದ ವಿದ್ಯಾರ್ಥಿಗಳ ಪೋಷಕರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುವುದರ ಕುರಿತಂತೆ ವರದಿಯೊಂದನ್ನು ತರಿಸಿ, ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮಗೊಳಿಸಿದ್ದಿದ್ದರೆ ಇಂದು ಯಾವ ಖಾಸಗಿ ಶಾಲೆಗಳೂ ಈ ಪರಿಯಲ್ಲಿ ಮೆರೆಯುವುದು ಸಾಧ್ಯವಿರುತ್ತಿರಲಿಲ್ಲ.

ಬಡವರ ಪಾಲಿಗೆ ಶಿಕ್ಷಣವೆನ್ನುವುದು ಗಗನಕುಸುಮವಾಗುತ್ತಿರಲಿಲ್ಲ. ಸರಕಾರಿ ಶಾಲೆಗಳು ಮುಚ್ಚುವುದರಿಂದ ಎರಡೆರಡು ರೀತಿಯಲ್ಲಿ ಅನ್ಯಾಯವಾಗಲಿದೆ. ಒಂದು, ಕನ್ನಡ ಭಾಷೆ ಸರಕಾರಿ ಶಾಲೆಯ ಜೊತೆ ಜೊತೆಗೇ ಬಾಡಿ ಹೋಗಲಿದೆ. ಜೊತೆಗೆ ಹಿಂದುಳಿದ ವರ್ಗ, ಶೋಷಿತ ವರ್ಗಗಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುವುದು ದುಸ್ತರವಾಗಲಿದೆ. ಸರಕಾರಿ ಶಾಲೆಗಳು ಮುಚ್ಚಿದುದರ ಲಾಭಗಳೆಲ್ಲವನ್ನು ಖಾಸಗಿ ಶಾಲೆಗಳು ದೋಚಿಕೊಳ್ಳುತ್ತವೆ. ಇಲ್ಲದವರು ಮತ್ತು ಇರುವವರ ನಡುವಿನ ಅಂತರವನ್ನು ಇವು ಇನ್ನಷ್ಟು ಹೆಚ್ಚಿಸುತ್ತವೆ.

ಮುಚ್ಚಿರುವ ಸರಕಾರಿ ಶಾಲೆಗಳನ್ನೇ ಗಮನಿಸಿ. ಎಲ್ಲ ಶಾಲೆಗಳಿಗೂ ವಿಶಾಲ ಆಟದ ಬಯಲುಗಳಿವೆ. ಸರಕಾರಿ ಶಾಲೆಗಳಿಗೆ ಇರುವಷ್ಟು ಸ್ಥಳಾವಕಾಶ ಖಾಸಗಿ ಶಾಲೆಗಳಿಗಿಲ್ಲ. ಇಂದು ಸರಕಾರಿ ಶಾಲೆಗಳ ಖಾಲಿ ಭೂಮಿಯ ಮೇಲೆಯೇ ಕೆಲವು ಹಿತಾಸಕ್ತಿಗಳ ಕಣ್ಣು ಬಿದ್ದಿದೆ. ಆದುದರಿಂದಲೇ, ಸರಕಾರಿ ಶಾಲೆಗಳು ಮುಚ್ಚುವುದಕ್ಕೆ ಒಂದು ದೊಡ್ಡ ಸಂಚೇ ನಡೆಯುತ್ತಿದೆ. ಬಹುತೇಕ ಖಾಸಗಿ ಶಾಲೆಗಳ ಹಿಂದೆ ರಾಜಕಾರಣಿಗಳು, ಬೃಹತ್ ಉದ್ಯಮಿಗಳು ಹಣ ಹೂಡಿದ್ದಾರೆ. ಇವರಿಗೆಲ್ಲ ಸರಕಾರಿ ಶಾಲೆಗಳು ಮುಚ್ಚುವುದು ಬೇಕು. ಅದಕ್ಕಾಗಿ ಅವರು ವಿಶೇಷ ಕಾರ್ಯಾಚರಣೆ ಮಾಡಬೇಕಾಗಿಲ್ಲ. ಸರಕಾರಿ ಶಾಲೆಗಳನ್ನು ವರ್ತಮಾನಕ್ಕೆ ಪೂರಕವಾಗಿ ಅತ್ಯಾಧುನಿಕತೆಗೆ ತೆರೆದುಕೊಳ್ಳದಂತೆ ನೋಡಿಕೊಂಡರೆ ಸಾಕು. ಇಂದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಇದೇ ಕಾರಣ. ಸರಕಾರಿ ಶಾಲೆಗಳ ಮುಂದಿರುವ ಮೊತ್ತ ಮೊದಲ ಸವಾಲು ‘ಮಾಧ್ಯಮ’.

ಸರಕಾರಿ ಶಾಲೆ ಎಂದ ಮೇಲೆ ಕನ್ನಡ ಮಾಧ್ಯಮದಲ್ಲೇ ಪಾಠ ಮಾಡಬೇಕು ಎನ್ನುವಂತಹ ಒತ್ತಡ ಇದೆ. ಆದರೆ ವರ್ತಮಾನದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ನೂರೆಂಟು ಸಮಸ್ಯೆಗಳನ್ನು ಎದುರಿಸಬೇಕು. ಹಾಗೆಯೇ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿತ ಮಕ್ಕಳಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರಕುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆ-ಖಾಸಗಿ ಶಾಲೆ ತಿಕ್ಕಾಟಕ್ಕಿಂತಲೂ ಕನ್ನಡ ಮಾಧ್ಯಮ-ಇಂಗ್ಲಿಷ್ ಮಾಧ್ಯಮ ತಿಕ್ಕಾಟವೇ ಇಲ್ಲಿ ಪ್ರಧಾನ ವಿಷಯ. ಇಂತಹ ಸಂದರ್ಭದಲ್ಲಿ ಈ ಹಿಂದೆ ಒಂದು ಪ್ರಮುಖ ಸಲಹೆ ಕೇಳಿ ಬಂದಿತ್ತು. ಒಂದನೆ ತರಗತಿಯಿಂದ ಇಂಗ್ಲಿಷ್ ಪಠ್ಯವನ್ನು ಅಳವಡಿಸುವುದು. ಆದರೆ ದುರಂತವೆಂದರೆ, ಕೆಲವು ಮೇಲ್ವರ್ಗದ ಕನ್ನಡ ಸಾಹಿತಿಗಳು ಇದಕ್ಕೂ ಅವಕಾಶ ನೀಡಲಿಲ್ಲ.

ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗಳಿಗೆ ಕಳುಹಿಸುತ್ತಿರುವ ಸಾಹಿತಿಗಳೇ, ಒಂದನೆ ತರಗತಿಯಲ್ಲಿ ಇಂಗ್ಲಿಷನ್ನು ಒಂದು ಪಠ್ಯವಾಗಿ ಬೋಧಿಸುವುದನ್ನು ವಿರೋಧಿಸಿದರು. ಒಂದು ವೇಳೆ, ಈ ಪ್ರಯೋಗ ಹತ್ತು ವರ್ಷಗಳ ಹಿಂದೆಯೇ ಆರಂಭವಾಗಿದ್ದಿದ್ದರೆ ಇಂದು ಸಾಕಷ್ಟು ಸರಕಾರಿ ಶಾಲೆಗಳು ಉಳಿದು ಬಿಡುತ್ತಿದ್ದವೋ ಏನೋ? ಅದೇನೇ ಇರಲಿ. ಇಂದು ಬರೇ ಭಾಷೆಯ ಒಂದು ಕಾರಣಕ್ಕಾಗಿ ಸರಕಾರಿ ಶಾಲೆಗಳು ಮುಚ್ಚಿ ಹೋಗಬಾರದು. ಯಾಕೆಂದರೆ ಕಲಿಕೆಯೆಂದರೆ ಬರೇ ಭಾಷೆಯಲ್ಲ. ಅದು ಜ್ಞಾನದ ಕಡೆಗೆ ನಮ್ಮನ್ನು ಒಯ್ಯುವ ಮಾಧ್ಯಮ ಮಾತ್ರ. ಈ ಕಾರಣದಿಂದ ಸರಕಾರಿ ಶಾಲೆಗಳು ತಮ್ಮ ಕಲಿಕೆಯ ಕ್ರಮದಲ್ಲೇ ಆಮೂಲಾಗ್ರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಪರಿಣಾಮಕಾರಿಯಾಗಿ ಇಂಗ್ಲಿಷ್ ಮತ್ತು ಕನ್ನಡವನ್ನು ಜೊತೆ ಜೊತೆಗೇ ಸರಕಾರಿ ಶಾಲೆಗಳು ಕೊಂಡೊಯ್ಯಬೇಕು.

ಹಾಗೆಯೇ ಅಗತ್ಯ ಬಿದ್ದರೆ ಕನ್ನಡ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಶಾಲೆಗಳಾಗಿ ಪರಿವರ್ತಿಸುವ ಮೂಲಕವೂ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಇಂಗ್ಲಿಷ್ ಮಾಧ್ಯಮದ ಸರಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಕನ್ನಡವನ್ನು ಪರಿಣಾಮಕಾರಿಯಾಗಿ ಬೋಧಿಸುವ ಕಾರ್ಯ ನಡೆದರೆ ಶಾಲೆಗಳೂ ಉಳಿಯುತ್ತವೆ, ಕನ್ನಡವೂ ಉಳಿಯುತ್ತವೆ. ಇಲ್ಲವಾದರೆ ಅಷ್ಟೂ ಕನ್ನಡವನ್ನೂ ಉಳಿಸುವುದು ಸಾಧ್ಯವಿಲ್ಲ. ಸರಕಾರ ಘೋಷಿಸಿರುವ ಮೊಟ್ಟೆ, ಹಾಲು, ಸಮವಸ್ತ್ರ, ಸೈಕಲ್ ಮೊದಲಾದ ಯೋಜನೆಗಳು ಶ್ಲಾಘನೀಯ. ಆದರೆ ಇವೆಲ್ಲವೂ ಪೂರಕವಾಗಿ ಕೆಲಸ ಮಾಡುವಂತಹದು. ಶಾಲೆಗಳಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣವನ್ನು ಮೊದಲು ನಿರೀಕ್ಷಿಸುತ್ತಾರೆ.

ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ಸಿಗುವುದಿಲ್ಲ ಎನ್ನುವ ಪೂರ್ವಾಗ್ರಹ ಅಳಿಯದೇ ಹೋದರೆ ಬರೇ ಮೊಟ್ಟೆ, ಹಾಲಿನಿಂದ ಸರಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ. ಆದುದರಿಂದ ಸರಕಾರಿ ಶಾಲೆಗಳಲ್ಲಿ ಅತ್ಯಾಧುನಿಕವಾದ ಪ್ರಯೋಗಶಾಲೆಗಳು, ಗ್ರಂಥಾಲಯ, ಆಟದ ಮೈದಾನ ಇತ್ಯಾದಿಗಳನ್ನು ರೂಪಿಸಲು ಸರಕಾರ ಆದ್ಯತೆ ವಹಿಸಬೇಕು ಮತ್ತು ಸರಕಾರಿ ಶಾಲೆಗಳಿಗೆ ಅತ್ಯುತ್ತಮ ಅಂಕಗಳು ಬಂದರೆ ಅದನ್ನು ಜಾಹೀರಾತುಗಳ ಮೂಲಕ ಘೋಷಿಸಿ ಜನರನ್ನು ಸೆಳೆಯಬೇಕು. ಪ್ರತೀ ವರ್ಷ ಸರಕಾರಿ ಶಾಲೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಆ ಶಾಲೆ ಮತ್ತು ವಿದ್ಯಾರ್ಥಿಗಳ ಭಾವಚಿತ್ರವನ್ನು ಶಿಕ್ಷಣ ಇಲಾಖೆ ಮಾಧ್ಯಮಗಳ ಮೂಲಕ ಪ್ರಕಟಿಸಬೇಕು.

ಸರಕಾರಿ ಶಾಲೆಗಳ ಸಾಧನೆಗಳನ್ನು ತಿಳಿಸಲು ಪ್ರತ್ಯೇಕ ಗೋಷ್ಠಿಗಳನ್ನು ಹಮ್ಮಿಕೊಳ್ಳಬೇಕು. ಆಗ ತನ್ನಷ್ಟಕ್ಕೇ ಖಾಸಗಿ ಶಾಲೆಗಳ ಮೋಹವನ್ನು ತೊರೆದು ಸರಕಾರಿ ಶಾಲೆಗಳ ಕಡೆಗೆ ವಿದ್ಯಾರ್ಥಿಗಳು ಧಾವಿಸುತ್ತಾರೆ. ಎಲ್ಲ ಜಾತಿ, ಧರ್ಮ, ವರ್ಗದ ವಿದ್ಯಾರ್ಥಿಗಳು ಒಂದಾಗಿ ಕಲಿಯುವ ಅವಕಾಶಗಳಿ ರುವುದು ಸರಕಾರಿ ಶಾಲೆಗಳಲ್ಲಿ ಮಾತ್ರ. ಒದಗಿಸಿಕೊಡುತ್ತದೆ. ಎಳೆ ವಯಸ್ಸಿನಲ್ಲೇ ಎಲ್ಲ ಜಾತಿ ಧರ್ಮದ ಜನರು ಒಂದಾಗಿ ಕಲಿಯುತ್ತಾ, ಓದುತ್ತಾ, ಆಡುತ್ತಾ, ಬಿಸಿಯೂಟ ಸೇವಿಸುತ್ತಾ ಬೆಳೆದರೆ ಸಮಾಜದಲ್ಲಿ ಬೆಳೆಯುವ ಗೋಡೆಗಳು ಸಣ್ಣದಾಗುತ್ತಾ ಹೋಗುತ್ತದೆ.

ಎಳವೆಯಲ್ಲೇ ಮಕ್ಕಳ ತಲೆಗೆ ಧರ್ಮ, ಜಾತಿಗಳ ಸಿದ್ಧಾಂತಗಳನ್ನು ತುಂಬಿ ಅವರನ್ನು ಬೇರ್ಪಡಿಸುವ ಕೆಲಸಗಳು ಇಂದು ನಿರ್ದಿಷ್ಟ ಶಾಲೆಗಳಲ್ಲೇ ನಡೆಯುತ್ತಿರುವಾಗ, ಸರಕಾರಿ ಶಾಲೆಗಳು ಮಾತ್ರ ಈ ಭೇದಗಳನ್ನು ಅವರೊಳಗಿಂದ ಅಳಿಸಿ ಪರಿಪೂರ್ಣ ಭಾರತೀಯರಾಗಿ ರೂಪಿಸಲು ಸಾಧ್ಯ. ಈ ಕಾರಣಕ್ಕಾಗಿಯೇ ವಿದ್ಯಾರ್ಥಿಗಳು ಯಾವ ಮಾಧ್ಯಮಗಳಲ್ಲಿ ಬೇಕಾದರೂ ಕಲಿಯಲಿ, ಆದರೆ ಜಾತಿ ಧರ್ಮ ಬದಿಗಿಟ್ಟು ಒಂದಾಗಿ ಕಲಿಯಲಿ. ಒಳ್ಳೆಯದನ್ನು ಕಲಿಯಲಿ. ಈ ನಿಟ್ಟಿನಲ್ಲಿ ದೇಶದ ಅಳಿದುಳಿದ ಭವಿಷ್ಯ ಸರಕಾರಿ ಶಾಲೆಗಳಲ್ಲೇ ಉಳಿದಿದೆ. ದೇಶದ ಭವಿಷ್ಯ ಉಳಿಸುವ ಸಲುವಾಗಿ ನಾವು ಸರಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News