ಸಂಸದರ ನಿರ್ಲಕ್ಷ್ಯದಿಂದ ಸೂಕ್ಷ್ಮ ಪರಿಸರ ವಲಯ ನಿರ್ಮಾಣ : ಕಾಂಗ್ರೆಸ್ ಆರೋಪ

Update: 2017-06-05 11:29 GMT

ಮಡಿಕೇರಿ. ಜೂ,5 :ಜನವಸತಿಯ ಗ್ರಾಮಗಳನ್ನು ಒಳಗೊಂಡಂತೆ ತಲಕಾವೇರಿ ವನ್ಯಧಾಮ ಮತ್ತು ಪಟ್ಟಿಘಾಟ್ ಅರಣ್ಯ ಪ್ರದೇಶವನ್ನು ಕೇಂದ್ರ ಸರ್ಕಾರ ಜನರ ಭಾವನೆಗಳಿಗೆ ಬೆಲೆ ನೀಡದೆ ಸೂಕ್ಷ್ಮ ಪರಿಸರ ವಲಯವನ್ನಾಗಿ ಘೋಷಿಸಿದೆ ಎಂದು ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಎಸ್.ರಮಾನಾಥ್, ಪರಿಸರ ಸೂಕ್ಷ್ಮ ಪ್ರದೇಶದ ವಿವಾದದ ಜವಬ್ದಾರಿಯನ್ನು ನನ್ನ ಹೆಗಲಿಗೆ ಬಿಡಿ ಎಂದು ಹೇಳಿದ್ದ ಸಂಸದ ಪ್ರತಾಪ ಸಿಂಹ ಅವರು ಇದೀಗ ಜನರ ತಲೆಯ ಮೇಲೆ ಕಲ್ಲು ಹೇರಿ ತಾವು ನೆಮ್ಮದಿಯಾಗಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯ ಸರ್ಕಾರದ ಆಕ್ಷೇಪಣೆಗಳನ್ನು ಕೇಂದ್ರ ಸರಕಾರ ಕಡೆಗಣಿಸಿದೆ. ಪ್ರಸ್ತುತ ಭಾಗಮಂಡಲ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಭಾಗಮಂಡಲ, ತಣ್ಣಿಮಾನಿ, ಚೇರಂಗಾಲ ಗ್ರಾಮಗಳು ಹಾಗೂ ಅಯ್ಯಂಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣ ಪುಲಿಕೋಟು, ಅಯ್ಯಂಗೇರಿ, ಬಲ್ಲಮಾವಟಿ, ಪೇರೂರು ಗ್ರಾಮಗಳನ್ನು ಹಾಗೂ ಕರಿಕೆ, ಚೆಂಬು, ಸಂಪಾಜೆ ಗ್ರಾಮೀಣ ಭಾಗಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡಿಸುವ ಮೂಲಕ ಗ್ರಾಮೀಣರ ಬದುಕಿಗೆ ಸಂಕಷ್ಟವನ್ನು ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಲ್ಲಿನ ಹಲವು ಮಂದಿಗೆ ತಮ್ಮ ವಾಸದ ಜಾಗಕ್ಕೆ ಪಟ್ಟೆ ವಿತರಣೆ ಸಾಧ್ಯವಾಗುತ್ತಿಲ್ಲ, ಪಟ್ಟೆ ವಿತರಣೆ ಪ್ರಕ್ರಿಯೆಯ ಹಂತದ ಪ್ರಕರಣಗಳು ಕೂಡ ಇತ್ಯರ್ಥವಾಗದಂತಹ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಸಂಸದ ಪ್ರತಾಪ ಸಿಂಹ ಹಾಗೂ ಜಿಲ್ಲೆಯ ಶಾಸಕದ್ವಯರ ನಿರ್ಲಕ್ಷ್ಯ ಧೋರಣೆಯೇ ಕಾರಣರೆಂದು ರಮಾನಾಥ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News