ಸಚಿವರ ಭರವಸೆ ಮೇರೆಗೆ ಪ್ರತಿಭಟನೆ ವಾಪಸ್
ಹಾಸನ, ಜೂ.5; ಆನೆ ದಾಳಿಯಿಂದ ಕಾಫಿ ಬೆಳೆಗಾರನ ದುರ್ಮರಣದಿಂದ ಕುಪಿತಗೊಂಡ ಸಂಬಂಧಿಕರು ಆಕ್ರೋಶಗೊಂಡು, ನಂತರ ಜಿಲ್ಲಾ ಮಂತ್ರಿಯ ಭರವಸೆ ಮೆರೆಗೆ ಪ್ರತಿಭಟನೆ ಕೈಬಿಟ್ಟಿದ್ದಾರೆ.
ಸಕಲೇಶಪುರ ತಾಲೂಕಿನ ಹೈದೂರು ಗ್ರಾಮದ ಕಿರಣ್ (55) ಎಂಬುವರೇ ಅಡ್ರಿವಳ್ಳಿ ಎಸ್ಟೇಟ್ ಬಳಿ ಸಲಗನ ದಾಳಿಯಿಂದ ಗಾಯಗೊಂಡು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ದುರ್ದೈವಿ.
ರಾತ್ರಿ ಸಮಯದಲ್ಲಿ ಎಸ್ಟೇಟ್ ಬಳಿ ಹೋಗುತ್ತಿದ್ದಾಗ ಮತ್ತೋರ್ವನ ಕಾಪಾಡಲು ಹೋಗಿ ಇವರು ಬಲಿಪಶು ಆಗಿದ್ದಾರೆ. ಆಕ್ರೋಶಗೊಂಡ ಸಂಬಂಧಿಕರು ಜಿಲ್ಲಾ ಆಸ್ಪತ್ರೆ ಮುಂದೆ ಪ್ರತಿಭಟನೆಗೆ ಮುಂದಾದರು. ಕೆಲ ಸಮಯದಲ್ಲೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರು ಸರಕಾರದ ಕಡೆಯಿಂದ ಕಿರಣ್ ಕುಟುಂಬದವರಿಗೆ 2 ಲಕ್ಷ ರೂ.ಗಳ ಚೆಕ್ ವಿತರಿಸಿದರು. ನಂತರ ಕೆಲ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ತಮ್ಮ ಪ್ರತಿಭಟನೆ ಕೈಬಿಡಲಾಗಿದೆ.
ಕಾಡಾನೆ ಮತ್ತು ಮಾನವ ನಡುವಿನ ಸಂಘರ್ಷ ಪದೇ ಪದೇ ನಡೆಯುತ್ತಿದ್ದು, ಇದರಿಂದ ಶಾಶ್ವತ ಪರಿಹಾರ ಲಭ್ಯವಾಗುತ್ತಿಲ್ಲ. ಕೇವಲ ಆರ್ಥಿಕ ಪರಿಹಾರವನ್ನು ನೀಡಿ ಸರಕಾರ ಕೈಕಟ್ಟಿ ಕುಳಿತ್ತಿದ್ದು, ಇದರಿಂದ ಈ ಭಾಗದ ಜನರಿಗೆ ತೀರಾ ತೊಂದರೆ ಆಗುತ್ತಿದೆ. ಈ ಬಾರಿ ಅಧಿವೇಶನದಲ್ಲಿ ಈ ಬಗ್ಗೆ ನಾನು ಹಾಗೂ ಈ ಕ್ಷೇತ್ರದ ಶಾಸಕರು ಚರ್ಚೆಯನ್ನು ನಡೆಸುತ್ತೇವೆ. ಆತ್ಮಹತ್ಯೆ ಮಾಡಿಕೊಂಡು ರೈತರಿಗೆ ಪರಿಹಾರ ಮತ್ತು ಅವರು ಕುಟುಂಬಕ್ಕೆ ಮಾಶಾಸನ ನೀಡುತ್ತಿರುವಂತೆ ಕಾಡಾನೆ ದಾಳಿಯಿಂದ ಸಾವನ್ನಪ್ಪುವ ಕುಟುಂಬಸ್ಥರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.
ಅಧಿವೇಶನ ಮುಗಿದ ನಂತರ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಒಟ್ಟಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಆನೆ ಕಾರಿಡಾರ್ ಗೆ ಪ್ರಸ್ತಾವನೆ ಸಲ್ಲಿಸಿ ಒತ್ತಡ ಏರಲಾಗುವುದು. ಕಾಡಾನೆಗಳು ಇರುವ ಭಾಗದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಜಾಗೃತಿ ವಾಹನವನ್ನು ಗಸ್ತು ತಿರುಗುವಂತೆ ಈಗಾಗಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಇದೆ ವೇಳೆ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಇತರರು ಇದ್ದರು.