×
Ad

ಪರಿಸರ ಮಾಲಿನ್ಯಕ್ಕೆ ಕಡಿವಾಣ ಅಗತ್ಯ : ಜಿಲ್ಲಾಧಿಕಾರಿ ಬಿ.ರಾಮು

Update: 2017-06-05 18:25 IST

ಚಾಮರಾಜನಗರ, ಜೂ. 5: ಜಗತ್ತಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕದಿದ್ದರೆ ಮನುಕುಲ ಅಪಾಯದ ಅಂಚಿಗೆ ಸಿಲುಕಬೇಕಾದ ಪರಿಸ್ಥಿತಿಗೆ ತಲುಪಬಹುದೆಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ರಂಗತರಂಗ ಹಾಗೂ ರಂಗವಾಹಿನಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಪರಿಸರ ಬಗೆಗಿನ ಕಾಳಜಿ ಹೊಂದದಿದ್ದರೆ ಅನಾಹುತಗಳನ್ನು ಎದುರಿಸುವ ಸಂದರ್ಭ ಬರಬಹುದು. ಹೀಗಾಗಿ ವ್ಯಾಪಕವಾಗಿ ಪರಿಸರ ಸಂರಕ್ಷಿಸಿ ಪೋಷಿಸುವ ಹೊಣೆಗಾರಿಕೆಯನ್ನು ವಹಿಸಬೇಕಿದೆ. ವಿಶೇಷವಾಗಿ ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದ ಪರಿಸರ ಕಾಪಾಡುವ ಜಾಗೃತಿಯನ್ನು ಉಂಟುಮಾಡಬೇಕಿದೆ ಎಂದರು.

ಈ ಹಿಂದೆ ಪ್ರಕೃತಿ ಮಡಿಲಲ್ಲಿ ಬಾಲ್ಯ ಕಳೆಯುವ ಅವಕಾಶ ಲಭಿಸುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಇಂತಹ ಸಂದರ್ಭಗಳಿಂದ ಮಕ್ಕಳು ದೂರವಾಗುತ್ತಿದ್ದಾರೆ. ಸಹಜ ಆಟಪಾಠಗಳಲ್ಲಿ ತೊಡಗಿಕೊಂಡು ಅವರದ್ದೇ ಆದ ಅನುಭವ ಹೊಂದುವ ಅವಕಾಶವನ್ನು ಪೋಷಕರು ನೀಡಬೇಕಿದೆ. ಪರಿಸರ ಬಗೆಗಿನ ಅರಿವನ್ನು ಬಾಲ್ಯದಲ್ಲಿಯೇ ಮೂಡಿಸಿದರೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ರಾಮು ಅನಿಸಿಕೆ ವ್ಯಕ್ತಪಡಿಸಿದರು.

ಗಿಡಮರಗಳನ್ನು ಅನವಶ್ಯವಾಗಿ ಕಡಿದುಹಾಕುವ ಧೋರಣೆ ತಪ್ಪಬೇಕು. ಅಗತ್ಯಕ್ಕೆ ಅನುಸಾರವಾಗಿ ಒಂದು ಮರ ಕಡಿದುಹಾಕಬೇಕಾದ ಅನಿವಾರ್ಯತೆ ಉಂಟಾದರೆ ಹತ್ತು ಸಸಿಗಳನ್ನು ನೆಟ್ಟು ಪೋಷಿಸುವ ಹೊಣೆಗಾರಿಕೆ ಇರಬೇಕು. ಉತ್ತಮ ಪರಿಸರ ನಿರ್ವಹಣೆಗೆ ನಾವೇನು ಕೊಡುಗೆ ನೀಡಿದ್ದೇವೆ ಎಂಬ ಚಿಂತನೆ ಮಾಡಬೇಕು. ಸಹಜ ಪರಿಸರ ಮೂಲಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ರಾಮು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಅಭಿವೃದ್ಧಿ ಚಿಂತನೆ ಕಲ್ಪನೆಗಳು ಬದಲಾಗುತ್ತಿವೆ. ಪ್ರಗತಿಗಾಗಿ ಪರಿಸರ ಹಾಳುಗೆಡವುದು ಸರಿಯಲ್ಲ. ಪ್ರಕೃತಿದತ್ತವಾದ ಪರಿಸರವನ್ನು ಸಂರಕ್ಷಿಸುವ ಮಹತ್ತರ ಕಾರ್ಯಕ್ಕೆ ಎಲ್ಲರ ಸಹಕಾರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಪರಿಸರ ಪೂರಕ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದಲೂ ಕೈಗೆತ್ತಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆ ಮೂಲಕ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಕಾಮಗಾರಿಯನ್ನು ನಡೆಸಲಾಗುತ್ತದೆ ಎಂದು ಹರೀಶ್ ಕುಮಾರ್ ತಿಳಿಸಿದರು.

 ಪರಿಸರ ದಿನ ಅಂಗವಾಗಿ ಶಾಲಾಮಕ್ಕಳಿಗೆ ಆಯೋಜಿಸಿದ್ದ ಚಿತ್ರಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಮಾತನಾಡಿ, ಎಷ್ಟೇ ಆರ್ಥಿಕವಾಗಿ ಸದೃಢರಾಗಿದ್ದರೂ ಪ್ರಕೃತಿ ಪರಿಸರ ಸಂಪತ್ತನ್ನು ಖರೀದಿಸಲು ಸಾಧ್ಯವಿಲ್ಲ. ಪರಿಸರ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಿ ಗಿಡಮರಗಳನ್ನು ಬೆಳೆಸಲು ಉತ್ತೇಜಿಸಬೇಕಿದೆ ಎಂದರು.

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಪಿ.ರಾಘವೇಂದ್ರ 
ಅವರು ಉಪನ್ಯಾಸ ನೀಡಿದರು. ಹಿರಿಯ ಅರಣ್ಯ ಅಧಿಕಾರಿಗಳಾದ ಎಸ್.ಎಸ್. ಲಿಂಗರಾಜು, ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಡಾ. ಆನಂದ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ವಿ.ಎಂ. ರಾಮಚಂದ್ರ, ಜಿಲ್ಲಾ ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್, ಸಿ.ಎಂ. ನರಸಿಂಹಮೂರ್ತಿ, ಕಲೆ ನಟರಾಜು, ಇತರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಪರಿಸರ ಜಾಗೃತಿ ಜಾಥಾಗೆ ಚಾಮರಾಜೇಶ್ವರ ದೇವಾಲಯ ಬಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಚಾಲನೆ ನೀಡಿದರು. ಬಳಿಕ ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ವಿವಿಧ ಬಗೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸ್ವತ: ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಲಯನ್ಸ್ ಸಂಸ್ಥೆ ಅಧ್ಯಕ್ಷ ಹೊಸೂರು ಜಗದೀಶ್ ಸೇರಿದಂತೆ ಇತರೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News