ಬಂಡೀಪುರ: ಸಾವಿರ ಗಂಧದ ಮರ ಬೆಳೆಸುವ ಯೋಜನೆಗೆ ಚಾಲನೆ
ಗುಂಡ್ಲುಪೇಟೆ, ಜೂ.5: ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಬಂಡೀಪುರ ವ್ಯಾಪ್ತಿಯಲ್ಲಿ 1000 ಗಂಧದಮರ ಬೆಳೆಸಲು ಸಸಿ ನೆಟ್ಟು ಚಾಲನೆ ನೀಡಲಾಯಿತು.
ಬಂಡೀಪುರ ಮುಖ್ಯಕಛೇರಿ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ಬಚಪನ್ ಬಚಾವೋ ಆಂದೋಲನದ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಎ.ಸಿ.ಎಫ.ಆಂಥೋಣಿ ಮರಿಯಪ್ಪ ಸಸಿ ನೆಟ್ಟು ಚಾಲನೆ ನೀಡಿದರು. ನಂತರ ಮಾತನಾಡುತ್ತಾ, ಗಿಡನೆಡುವುದರಿಂದ ಪ್ರತಿಯೊಬ್ಬರಿಗೂ ಆರೋಗ್ಯಕ್ಕೆ ಅನುಕೂಲಕರವಾದ ಶುದ್ದಗಾಳಿ ಸಿಗುತ್ತದೆ ಆದ್ದರಿಂದ ಎಲ್ಲರೂ ಖಡ್ಡಾಯವಾಗಿ ತಮ್ಮ ಮನೆಗಳ ಸುತ್ತಾಮತ್ತಾ ಮನೆಯ ಸದಸ್ಯರಂತೆ ಸಸಿ ನೆಟ್ಟು ಮರಬೆಳೆಸುವಂತೆ ಸಲಹೆ ನೀಡಿದರು.
ಬಂಡೀಪುರ ಅಭಯಾರಣ್ಯವು ಈ ಹಿಂದೆ ಗಂಧದಗುಡಿ ಎಂದು ಪ್ರಖ್ಯಾತವಾಗಿತ್ತು. ಇತ್ತೀಚಿಗೆ ಅರಣ್ಯದಲ್ಲಿ ಗಂಧದಮರ ಕ್ಷೀಣಿಸುತ್ತಿದೆ. ಹಾಗಾಗಿ ಮಂಗಲ ಗ್ರಾಮಪಂಚಾಯ್ತಿಯ ಹಳ್ಳಿಗಳಲ್ಲಿ ಸುಮಾರು 1 ಸಾವಿರ ಗಂಧದ ಮರ ಬೆಳೆಸಲು ಗ್ರಾಮಸ್ಥರು ಸಹಕಾರ ನೀಡಲು ಮುಂದಾಗಿದ್ದು, ಈ ಮೂಲಕ ಬಂಡೀಪುರ ಅರಣ್ಯವನ್ನು ಗಂಧದಗುಡಿ ನಿರ್ಮಾಣ ಮಡಲು ಪಣತೊಡಲಾಗಿದೆ ಎಂದರು.
ಸ್ವಚ್ಚ ಭಾರತ ಅಭಿಯಾನದಡಿ ಬಂಡೀಪುರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ 14 ಕಿಲೋಮೀಟರ್ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳಿಗೇಟ್‌ವರೆಗೆ ಶಾಲಾ ಮಕ್ಕಳ ಜೊತೆ ಅರಣ್ಯ ಸಿಬ್ಬಂಧಿಗಳು ಪ್ಲಾಸ್ಟಿಕ್ ಮುಕ್ತ ಅರಣ್ಯಕ್ಕೆ ಚಾಲನೆ ನೀಡುತ್ತಿದ್ದು, ಪ್ರವಾಸಿಗರು ಅರಣ್ಯವನ್ನು ಸಂರಕ್ಷಿಸಿ ಯಾರೂ ಕೂಡ ತ್ಯಾಜ್ಯವನ್ನು ಅರಣ್ಯದಂಚಿನ ರಸ್ತೆಗಳಲ್ಲಿ ಬಿಸಾಡಬೇಡಿ ಎಂದು ಮನವಿ ಮಾಡಿಕೊಂಡರು.