ಗುಂಡ್ಲುಪೇಟೆ: ಪತ್ರಕರ್ತರ ಸಂಘದೊಂದಿಗೆ ಪರಿಸರ ದಿನಾಚರಣೆ
ಗುಂಡ್ಲುಪೇಟೆ, ಜೂ.5: ಮಕ್ಕಳೇ ಗಿಡಗಳ ಪೋಷಕರಾಗಬೇಕು. ಓದಿನ ಜೊತೆಗೆ ವಾಸದ ಬಡಾವಣೆಗಳಲ್ಲಿ ಸಸಿ ನೆಟ್ಟು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ದೊಡ್ಡುಂಡಿಭೋಗಪ್ಪ ಕಾಲೇಜಿನ ಉಪಪ್ರಾಂಶುಪಾಲ ಎಚ್.ಪಿ.ಆನಂದ್ ಹೇಳಿದರು.
ಪಟ್ಟಣದ ದೊಡ್ಡುಂಡಿಭೋಗಪ್ಪ ಸರ್ಕಾರಿ ಕಾಲೇಜಿನ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಮೃತ ಟ್ರಸ್ಟ್ ಸಹಯೋಗದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಈ ನಾಡಿನ ಆಸ್ತಿ. ಅಂತೆಯೇ ಮರಗಳು ಕೂಡ ಪ್ರತೀ ಗ್ರಾಮಗಳ ಸಂಪತ್ತು ಆದ್ದರಿಂದ ಪೋಷಕರೊಡಗೂಡಿ ಓದಿನ ಜೊತೆಗೆ ಸಸಿ ನೆಟ್ಟು ಬರವನ್ನು ದೂರ ಮಾಡುವಂತೆ ಸಲಹೆ ನೀಡಿದರು.
ಇತ್ತೀಚಿಗೆ ವಾಹನ ಸಂಚಾರದ ದಟ್ಟಣೆ ಹೆಚ್ಚುತ್ತಿದೆ. ಮಿತಿಮೀರಿದ ಕಾರ್ಖಾನೆಗಳಿಂದ ವಾತಾವರಣ ಕಲುಷಿತಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಗಾಳಿಯೂ ಸಿಗದಿರುವ ವಾತಾವರಣ ಸೃಷ್ಟಿಯಾಗಬಹುದು. ಆದ್ದರಿಂದ ಮುಂಜಾಗೃತರಾಗಿ ಸಸಿ ನೆಟ್ಟು ಉತ್ತಮ ಪರಿಸರ ಉಳಿಸಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು ಮಾತನಾಡಿ, ರಸ್ತೆ ಅಗಲೀಕರಣ, ಅರಣ್ಯ ಒತ್ತುವರಿ ನೆಪದಲ್ಲಿ ಅರಣ್ಯ ನಾಶವಾಗುತ್ತಿದೆ. ಹಾಗಾಗಿ ಮಳೆ ಪ್ರಮಾಣ ಕಡಿಮೆಯಾಗಿತ್ತಿದೆ. ಅಲ್ಲದೆ ಪರಿಸರದಲ್ಲಿ ಪರಿಶುದ್ದ ಗಾಳಿ ಮಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಶುದ್ದ ಗಾಳಿ ಇರಲಿ, ಗಾಳಿಯೇ ಸಿಗದಿರುವ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಮುನ್ನೇಚ್ಚರಿಕೆ ಕ್ರಮವಹಿಸಿ ಪ್ರತಿಯೊಬ್ಬರೂ ಕೂಡ ಸಸಿ ನೆಟ್ಟು ಸಮತೋಲನ ಪರಿಸರ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ತಿಳಿಸಿದರು.
ಈಗಾಗಾಗಲೆ ಹೊರ ರಾಷ್ಟ್ರಗಳಲ್ಲಿ ಹಣ ಕೊಟ್ಟು ಆಕ್ಸಿಜನ್ ಪಡೆಯುತ್ತಿರುವ ನಿದರ್ಶನಗಳು ಉದ್ಭವಿಸಿದೆ. ಆದ್ದರಿಂದ ಈಗಲೇ ನಾವೆಲ್ಲರೂ ಹೆಚ್ಚು ಸಸಿ ನೆಡುವುದರ ಮೂಲಕ ಪರಿಸರ ಉಳಿಸಬೇಕಾದ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಶಿವವೀರಭದ್ರಪ್ಪ, ಉಮೇಶ, ಸಾವಿತ್ರಿ, ಭಾಗ್ಯಮ್ಮ, ವೀಣಾ, ಪತ್ರಕರ್ತರಾದ ಕೆ.ಎನ್, ಮಹದೇವಸ್ವಾಮಿ, ಮಹದೇವಪ್ರಸಾದ್, ರಾಜಗೋಪಾಲ್ ಸಿಬ್ಬಂಧಿಗಳಾದ ಸುಬ್ರಹ್ಮಣ್ಯ, ಸತ್ಯನಾರಾಯಣ್, ನಾಗೇಶ್, ಇದ್ದರು.