ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದ ಉದ್ಯೋಗಿಗೆ ಸಜೆ
ಚಾಮರಾಜನಗರ, ಜೂ. 5: ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದು, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಸಜೆ ಹಾಗೂ 2500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರಿನ ಮಹಾನಗರ ಪಾಲಿಕೆಯ ಬನ್ನಿಪೇಟೆ ಶಾಖೆಯಲ್ಲಿ ಮೌಲ್ಯಮಾಪಕರಾಗಿದ್ದ ಕೆ. ಚಂದ್ರಶೇಖರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ಕೊಳ್ಳೇಗಾಲ ತಹಶೀಲ್ದಾರ್ ಕಚೇರಿಯಿಂದ ಕಳೆದ 1993ರ ಜೂನ್ 28ರಂದು ಪರಿಶಿಷ್ಟ ವರ್ಗದ ಕಣಿಯನ್ ಜಾತಿಗೆ ಸೇರಿರುವುದಾಗಿ ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. 1998ರ ಏಪ್ರಿಲ್ 15ರಂದು ಬೆಂಗಳೂರು ಮಹಾನಗರ ಪಾಲಿಕೆಗೆ ಜಾತಿ ಪ್ರಮಾಣಪತ್ರ ನೀಡಿ ಇದರ ಆಧಾರದ ಮೇಲೆ ಪ್ರಥಮ ದರ್ಜೆ ಗುಮಾಸ್ತ ಹುದ್ದೆಯಿಂದ ಮೌಲ್ಯಮಾಪಕರ ಹುದ್ದೆಗೆ ಮುಂಬಡ್ತಿ ಪಡೆದಿದ್ದರು. ಕಣಿಯನ್ ಜಾತಿಗೆ ಸೇರಿಲ್ಲದೇ ಇದ್ದರು ಸಹ ಸರ್ಕಾರಕ್ಕೆ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ವಂಚಿಸಿ ಮೀಸಲಾತಿ ದುರ್ಬಳಕೆ ಮಾಡಿಕೊಂಡ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಅವರು ಕೆ. ಚಂದ್ರಶೇಖರ್‌ಗೆ ಒಂದು ವರ್ಷ ಸಜೆ ಹಾಗೂ 2500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.