​ಚಿಕ್ಕಮಗಳೂರು: ಮೂವರು ಶಂಕಿತ ನಕ್ಸಲರು ಮುಖ್ಯವಾಹಿನಿಗೆ

Update: 2017-06-05 14:58 GMT

ಚಿಕ್ಕಮಗಳೂರು, ಜೂ.5 ಜಿಲ್ಲೆಯ ಕಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು ಎನ್ನಲಾದ ಮೂವರು ಶಂಕಿತ ನಕ್ಸಲರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಎಡಪಂಥೀಯ ಶರಣಾಗತ ಸಮಿತಿ ಎದುರು ಸಮಾಜದ ಮುಖ್ಯವಾಹಿನಿ ಪ್ರವೇಶಿಸಿದ್ದಾರೆ.
 

ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಳುವಳ್ಳಿ ಗ್ರಾಮದ ಜರಿಮನೆ ಎಂಬಲ್ಲಿನ ಕನ್ಯಾಕುಮಾರಿ ಅಲಿಯಾಸ್ ಸುವರ್ಣ (30),

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಚೆನ್ನಮ್ಮ ಅಲಿಯಾಸ್ ಸುಮಾ(32) ಮತ್ತು

ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಕಂಟ್ರಕ್ಲಬ್ ರಸ್ತೆಯ ಶಿವು ಅಲಿಯಸ್ ಜ್ಞಾನದೇವು(31) ಮುಖ್ಯವಾಹಿನಿಗೆ ಬಂದ ಶಂಕಿತ ನಕ್ಸಲರು ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ಮತ್ತು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಕನ್ಯಾಕುಮಾರಿ ಸುಮಾರು 13/14 ವರ್ಷಗಳಿಂದ ನಕ್ಸಲ್ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 33 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವು ಕಳೆದ 2 ವರ್ಷಗಳ ಹಿಂದೆ ವಿವಾಹವಾಗಿದ್ದು, ಚಿಕ್ಕಮಗಳೂರು ಸಹಿತ ಯಾವುದೇ ಭಾಗದಲ್ಲೂ ಇವರ ವಿರುದ್ಧ ಪ್ರಕರಣಗಳಿಲ್ಲ ಎಂದು ತಿಳಿದುಬಂದಿದೆ.

  ಚೆನ್ನಮ್ಮ ರಾಯಚೂರು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಹಾಗೂ ಮಲೆನಾಡು ಭಾಗಗಳಲ್ಲಿ 1999ರಿಂದ ಈತನಕ ನಕ್ಸಲ್ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದರು. ಇವರ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ.
 

2007ರಲ್ಲಿ ಒಮ್ಮೆ ಉಡುಪಿ ಜಿಲ್ಲೆಯಲ್ಲಿ ಬಂಧನವಾಗಿತ್ತು. ನಂತರ 2009ರಲ್ಲಿ ತಮಿಳುನಾಡಿನ ನೀಲಮೇಗಮ್ ಎಂಬವರನ್ನು ಮದುವೆಯಾಗಿದ್ದು, ಅಂದಿನಿಂದಲೂ ಭೂಗತರಾಗಿದ್ದರು. ನೀಲಮೇಗಂರನ್ನು 2015ರಲ್ಲಿ ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದರು.

 ಕನ್ಯಾಕುಮಾರಿ ಎಂಬವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಜಯಪುರ, ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಹಲವು ಘಟನೆಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 15 ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯಲ್ಲಿ 17 ಪ್ರಕರಣಗಳು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 1 ಪ್ರಕರಣ ದಾಖಲಾಗಿವೆ.
 

ಈ ಮೂರು ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಶರಣಾಗತ ಸಮಿತಿ ಮುಂದೆ ಸಮಾ ಜದ ಮುಖ್ಯವಾಹಿನಿಗೆ ಬಂದಿದ್ದಾರೆ.
 

  ಇವರಿಗೆ ಕರ್ನಾಟಕ ಸರಕಾರದ ಎಡಪಂಥೀಯ ತೀವ್ರಗಾಮಿಗಳ ಶರಣಾಗತ ಯೋಜನೆಯಲ್ಲಿ ಲಭ್ಯವಿರುವ ಸವಲತ್ತು ಗಳನ್ನು ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಆರೋಪಿಗಳ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಇರುವ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಮತ್ತು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
 

ಈ ಸಮಯದಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News