×
Ad

ಎಪಿಎಂಸಿ ಅಧ್ಯಕ್ಷ ಜಗದೀಶ್,ಪಿ.ಎಸ್.ಐ ಕಾಂತರಾಜ್ ವಿರುದ್ದ ಕ್ರಮಕ್ಕೆ ಒತ್ತಾಯ

Update: 2017-06-05 21:12 IST

ತುಮಕೂರು.ಜೂ.5: ವಕೀಲರ ಮೇಲೆ ಹಲ್ಲೆ ನಡೆಸಿರುವ ಎಪಿಎಂಸಿ ಅಧ್ಯಕ್ಷ ಜಗದೀಶ್ ಮತ್ತು ದೂರು ನೀಡಲು ಹೋದ ವಕೀಲರನ್ನು ಅಪಮಾನಿಸಿ,ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳದೆ ಇರುವ ತುಮಕೂರು ಗ್ರಾಮಾಂತರ ಠಾಣೆ ಪಿ.ಎಸ್.ಐ ಕಾಂತರಾಜು ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಕೀಲರು ಇಂದು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಕೀಲರಾದ ಷಣ್ಮುಖ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವ ಎಪಿಎಂಸಿ ಅಧ್ಯಕ್ಷ ಜಗದೀಶ್ ವಿರುದ್ದ ದೂರು ನೀಡಲು ಗ್ರಾಮಾಂತರ ಪೊಲೀಸ್ ಠಾಣೆಗೆ ಹಲ್ಲೆಗೆ ಒಳಗಾದವರು ಹೋದ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕಾಂತರಾಜು ಕೇಸು ತೆಗೆದುಕೊಳ್ಳದೆ ರಾಜೀ ಆಗುವಂತೆ ಒತ್ತಾಯಿಸಿದ್ದೇ ಅಲ್ಲದೆ, ನೀವು ರಾಜೀ ಯಾಗದಿದ್ದರೆ ನಿಮ್ಮ ಮೇಲೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಕಾಯ್ದೆ( ಆಟ್ರಾಸಿಟಿ) ಅಡಿಯಲ್ಲಿ ಕೇಸು ದಾಖಲಿಸಲು ಅವರು ಸಿದ್ದರಿದ್ದು, ಸಮಸ್ಯೆ ಬಗೆಹರಿಸಿಕೊಳ್ಳವಂತೆ ಒತ್ತಡ ಹೇರಿದ್ದಾರೆ.

ಆದರೆ ಒತ್ತಡಕ್ಕೆ ಮಣಿಯದೆ ವಕೀಲರು ದೂರು ನೀಡಿದ್ದು, ದೂರು ನೀಡಿ ನಾಲ್ಕೈದು ದಿನ ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಕನಿಷ್ಠ ಎಫ್.ಐ.ಅರ್. ಕೂಡ ದಾಖಲಿಸಿಲ್ಲ. ಇದನ್ನು ಪ್ರಶ್ನಿಸಿದಕ್ಕಾಗಿ ವಕೀಲ ಷಣ್ಮುಖ ಅವರನ್ನೇ ಅವಾಚ್ಚ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿರುವ ಪಿ.ಎಸ್.ಐ ಕಾಂತರಾಜು ಅವರನ್ನು ಸೇವೆಯಿಂದ ಅಮಾನತ್ತು ಪಡಿಸಬೇಕು. ವಕೀಲರ ಮೇಲೆ ಹಲ್ಲೆ ನಡೆಸಿದ ಎಪಿಎಂಸಿ ಅಧ್ಯಕ್ಷ ಜಗದೀಶ್ ಅವರನ್ನು ಬಂಧಿಸಬೇಕು ಎಂದು ವಕೀಲರು ಒತ್ತಾಯಿಸಿದರು.

ವಕೀಲ ಸಂಘದ ಅಧ್ಯಕ್ಷ ಹರಿಕುಮಾರ್ ಮಾತನಾಡಿ, ಷಣ್ಮುಖರವರ ಮೇಲೆ ಎಪಿಎಂಸಿ ಅಧ್ಯಕ್ಷ ಜಗಧೀಶ್ ಹಲ್ಲೆ ಮಾಡಿ ನಿಂದಿಸಿದ್ದು ತಪ್ಪು.ಈ ಬಗ್ಗೆ ಶುಕ್ರವಾರದಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೂ ಇಲ್ಲಿಯವರೆಗೂ ಆರೋಪಿ ಮೇಲೆ ಪ್ರಕರಣ ದಾಖಲಾಗಿಲ್ಲ.ಅಷ್ಟೇ ಅಲ್ಲದೆ ಸಬ್ ಇನ್ಸ್‌ಪಕ್ಟರ್ ಕಾಂತರಾಜು, ವಕೀಲರಿಗೆ ಧಮ್ಕಿ ಹಾಕಿದ್ದಾರೆ. ಜಗದೀಶ್‌ರಿಂದ ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ಹಾಕುತ್ತಾರೆ.ನೀವು ಅವರೊಂದಿಗೆ ರಾಜೀ ಆಗಿ ಎಂದು ಒತ್ತಾಯ ಮಾಡಿದ್ದಾರೆ.ಈ ಬಗ್ಗೆ ನಮಗೆ ನ್ಯಾಯ ಒದಗಿಸುವುವರೆಗೂ ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದರು.

ಸ್ಥಳಕ್ಕೆ ತಿಲಕ್‌ಪಾರ್ಕು ಪೊಲೀಸ್ ಠಾಣೆಯ ಸಿಪಿಐ ರಾಘವೇಂದ್ರ ಮತ್ತಿತರರು ಹಿರಿಯ ಅಧಿಕಾರಿಗಳು ಭೇಟಿ ನೀಡಿ, ವಕೀಲರ ಮನವೊಲಿಸುವ ಪ್ರಯತ್ನ ನಡೆಸಿದ್ದರು.ವಕೀಲರು ತಮ್ಮ ಬೇಡಿಕೆಯಿಂದ ಹಿಂದೆ ಸರಿದಿಲ್ಲ.ಸಂಬಂಧಪಟ್ಟವರ ವಿರುದ್ದ ಸೂಕ್ತ ಕ್ರಮ ಜರುಗಿಸುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ನೂರಾರು ವಕೀಲರು ಭಾಗವಹಿಸಿದ್ದರು.(ಫೋಟೋ ಇದೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News