ಶಾಲಾ ಮಕ್ಕಳ ಆಟೊ ಪಲ್ಟಿ
ಸುಂಟಿಕೊಪ್ಪ, ಜೂ.5: ಸುಂಟಿಕೊಪ್ಪದಿಂದ ನಾಕೂರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊವೊಂದು ಪಾನಮತ್ತ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಮಗುಚಿಬಿದ್ದ ಪರಿಣಾಮ 8 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವರದಿಯಾಗಿದೆ.
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಿಂದ ಸಂಜೆ ವೇಳೆ ನಾಕೂರು-ಶಿರಂಗಾಲ ಗ್ರಾಪಂ ವ್ಯಾಪ್ತಿಯ ನಾಕೂರು ಕಾಲನಿ ಭಾಗದ ಮಕ್ಕಳನ್ನು ನಾಕೂರು ಕಾಲನಿ ನಿವಾಸಿ ಆಟೊ ಚಾಲಕ ರಾಜ ಎಂಬವರು ತನ್ನ ಆಟೊದಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ನಾಕೂರು-ಶಿರಂಗಾಲ ರಸ್ತೆಗೆ ತಿರುಗಿಸುವ ಸಂದಭರ್ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೊ ರಸ್ತೆಯಲ್ಲಿ ಮಗುಚಿಬಿದ್ದಿದೆ. ವಾಹನವು 2 ಬಾರಿ ಪಲ್ಟಿಯಾಗುತ್ತಿದ್ದಂತೆಯೇ ಮಕ್ಕಳ ಚೀರಾಟಗಳು ಕೇಳಲಾರಂಭಿಸಿದೆ. ಈ ಸಂದಭರ್ ಅಂದಗೋವೆ ಕಡೆಯಿಂದ ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದ ಕಾರೊಂದು ವಾಹನ ನಿಲ್ಲಿಸಿ ಮುಂದಾಗುವ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಸಂದರ್ಭದಲ್ಲಿ ಆಟೊದಲ್ಲಿ 8 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಅವರ ತಲೆ ಕೈ ಕಾಲುಗಳಿಗೆ ಗಾಯಗಳಾಗಿವೆ. ಸುಂಟಿಕೊಪ್ಪದಲ್ಲಿ ಕೆಲ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸ್ಥಳಕ್ಕೆ ಸುಂಟಿಕೊಪ್ಪಠಾಣೆಯ ಎಎಸ್ಸೈಗಳಾದ ಗುಣಶೇಖರ್, ಪಾರ್ಥ ತೆರಳಿ ಪರಿಶೀಲನೆ ನಡೆಸಿ, ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.