ರೈತರು ಪೋಲಿಸ್ ಗೋಲಿಬಾರ್ ನಿಂದ ಸಾವಿಗೀಡಾಗಿಲ್ಲ: ಮಧ್ಯಪ್ರದೇಶ ಗೃಹ ಸಚಿವರ ಸಮರ್ಥನೆ

Update: 2017-06-07 05:16 GMT

ಭೋಪಾಲ್, ಜೂ.7: ಪೊಲೀಸರ ಗುಂಡೇಟಿಗೆ ಸಿಲುಕಿ ಅರ್ಧಡಜನ್ ರೈತರು ಬಲಿಯಾಗಿದ್ದರೂ ಮಧ್ಯಪ್ರದೇಶದ ಗೃಹ ಸಚಿವ ಭೂಪೆಂದರ್ ಸಿಂಗ್ ರೈತರ ಸಾವು ಪೊಲೀಸರ ಗೋಲಿಬಾರ್ ನಿಂದ  ಸಂಭವಿಸಿಲ್ಲ. ಸಮಾಜಘಾತಕ ಶಕ್ತಿಗಳು ರೈತರನ್ನು ಕೊಂದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭೂಪೆಂದ್ರ ಸಿಂಗ್ " ಪೊಲೀಸರು ರೈತರತ್ತ ಗುಂಡು ಹಾರಿಸಿಲ್ಲ. ಸಮಾಜಘಾತಶಕ್ತಿಗಳು ಜನರ  ಮಧ್ಯದಿಂದ ಗುಂಡು ಹಾರಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.

ಇದರೊಂದಿಗೆ ಮಧ್ಯಪ್ರದೇಶದ ಮಂಡ್‌ಸೌರ್‌ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಮಂಗಳವಾರ ನಡೆದ ಘರ್ಷಣೆಯಲ್ಲಿ ಪೊಲೀಸರ ಗುಂಡೇಟಿಗೆ ಆರು ರೈತರು ಸಾವಿಗೀಡಾದ ಪ್ರಕರಣ ಹೊಸ ತಿರುವು ಪಡೆದಿದೆ.ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಲಾಗಿದ್ದು, ಸರಕಾರ ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ರೈತರು ತಮ್ಮ ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ಸಾಲ ಮನ್ನಾಕ್ಕೆ ಒತ್ತಾಯಿಸಿ ಐದು ದಿನದಿಂದ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ಪಡೆದು ಗೋಲಿಬಾರ್ ಗೆ ಆರು ರೈತರು,  ಬಲಿಯಾಗಿದ್ದರು. 

ಪೊಲೀಸರು ತಾಳ್ಮೆ ವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದ್ದರು ಎಂದು ಹೇಳುವ ಮೂಲಕ ಪೊಲೀಸರ ರಕ್ಷಣೆಗೆ ಮುಂದಾಗಿರುವ ಗೃಹಸಚಿವ ಭೂಪೇಂದ್ರ ಸಿಂಗ್ ರೈತರ ಮೇಲೆ ಗುಂಡು ಹಾರಿಸಿದ ಸಮಾಜಘಾತಕ ಶಕ್ತಿಗಳನ್ನು  ಕಾಂಗ್ರೆಸ್ ಬೆಂಬಲಿಸುತ್ತಿದೆ. ಅವರು ಉರಿಯುತ್ತಿರುವ ಬೆಂಕಿಗೆ ಎಣ್ಣೆ ಸುರಿದರು ಎಂದು ಆರೋಪಿಸಿದರು.

ಇದೇ ವೇಳೆ ಕಾಂಗ್ರೆಸ್ ಘಟನೆಯ ಬಗ್ಗೆ ತನಿಖೆಗೆ ಎಂಟು ಮಂದಿ ಸದಸ್ಯರ ಸಮಿತಿಯನ್ನು ರಚಿಸಿದ್ದು, ಗಲಭೆ ಪೀಡಿತ ಪ್ರದೇಶಕ್ಕೆ ತೆರಳಿ ಸಂಬಂಧಪಟ್ಟವರನು ಭೇಟಿಯಾಗಿ ಮಾಹಿತಿ ಕಲೆ ಹಾಕಲಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News