ಅನಧಿಕೃತ ಮದ್ಯ ಮಾರಾಟ ನಿಲ್ಲಿಸಿ: ಸಭೆಯಲ್ಲಿ ದಲಿತ ಮುಖಂಡರುಗಳ ಆಗ್ರಹ
ದಾವಣಗೆರೆ,ಜೂ.7 : ನಗರದ ಹಲವೆಡೆ ಅದರಲ್ಲಿಯೂ ಕೊಳಗೇರಿಗಳಲ್ಲಿ ಕಿರಾಣಿ ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ಅನಿಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಅವುಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರುಗಳು ಒತ್ತಾಯಿಸಿದರು.
ಬುಧವಾರ ನಗರದ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಅಗ್ರಹ ಪಡಿಸಿದರು. ಕೊಳಗೇರಿಯಲ್ಲಿ ದಲಿತರೇ ಹೆಚ್ಚಾಗಿ ವಾಸಿಸುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಹಾಗೂ ದಲಿತ ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಸಿ.ಸಿ ಟಿವಿ ಹಾಕಿಸುವುದು ಸೇರಿದಂತೆ ಪರಿಶಿಷ್ಠರ ದೌರ್ಜನ್ಯ ಕಾಯಿದೆ ಯಶ್ವಸಿ ಅನುಷ್ಠಾನ ಕುರಿತಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.
ಸಭೆಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಉಮೇಶ್, ಸಮಾಜಕಲ್ಯಾಣ ಇಲಾಖೆಯಿಂದ ವಿತರಿಸಲಾಗುತ್ತಿದ್ದ ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿತರಣೆಯಾಗುತ್ತಿಲ್ಲ. ಬಾಡಾ ಕ್ರಾಸ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಮದ್ಯದಂಗಡಿಗಳನ್ನು ರಾತ್ರಿ 10 ಕ್ಕೆ ಮುಚ್ಚುವಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಕೆಲವು ಕಡೆ ಲೈಂಗಿಕ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದ್ದು ಅದಕ್ಕೂ ಕಡಿವಾಣ ಹಾಕಬೇಕು. ಬೇತೂರು ರಸ್ತೆ, ಕೊಂಡಜ್ಜಿ ರಸ್ತೆ, ಬೂದಾಳ್ ರಸ್ತೆಗಳಲ್ಲಿ ನಾಕಾಬಂದಿ ಹೆಚ್ಚಿಸುವಂತೆ ಅಗ್ರಹಿಸಿದರು.
ಕಾರ್ಮಿಕ ಮುಖಂಡರಾದ ರಾಮಚಂದ್ರಪ್ಪ ಮಾತನಾಡಿ ಬಹಳ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಅಂಬೇಡ್ಕರ್ ಭವನ ಕಾಮಗಾರಿ ಆರಂಭವಾಗಿಲ್ಲ ಎಂದು ವಿಷಾದಿಸಿದರು. ಕಳೆದ 20-30 ವರ್ಷಗಳಿಂದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ದಲಿತರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಆನೆಕೊಂಡ ಬಳಿ 16 ಮನೆಗಳು ಎಸ್‌ಸಿ/ಎಸ್‌ಟಿ ಜನಾಂಗದವರು ನಿರ್ಮಿಸಿಕೊಂಡಿದ್ದು ಅವರಿಗೆ ಹಕ್ಕುಪತ್ರ ನೀಡಲು ಕೋರ್ಟ್ ಆದೇಶವಿದ್ದರೂ ನಗರಪಾಲಿಕೆಯವರು ಹಕ್ಕುಪತ್ರ ನೀಡುತ್ತಿಲ್ಲ.
ಡಾಂಗೆ ಪಾರ್ಕ್ ಸುತ್ತಮುತ್ತಲಿನ ವಾಸಿಗಳಿಗೆ ಎಲ್ಲಾ ಸೌಲಭ್ಯ ನೀಡಲಾಗಿದೆ. ಆದರೆ ಅವರಿಗೂ ಹಕ್ಕುಪತ್ರ ನೀಡಿಲ್ಲ. ಅದರಲ್ಲಿ ಶೇ. 90 ರಷ್ಟು ದಲಿತ ಜನಾಂಗದವರೇ ಇದ್ದಾರೆ ಎಂದರು. ಮತ್ತೋರ್ವ ಮುಖಂಡರಾದ ಹೆಗ್ಗೆರೆ ರಂಗಪ್ಪ ಮಾತನಾಡಿ ಎಸ್‌ಓಜಿ ಕಾಲನಿ ಬಹಳ ಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಲಿಗೆ ಪೋಲಿಸ್ ಔಟ್‌ಪೋಸ್ಟ್ ಕೊಡಲು ಮನವಿ ಮಾಡಿದರು ಹಾಗೂ ಈ ಬಾರಿ ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧ ಮಾಡಿದ್ದು, ಸರಿಯಾದ ಕ್ರಮವಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದರು.
ದಲಿತ ಮುಖಂಡರಾದ ಕೆ ಮಂಜುನಾಥ ಮಾತನಾಡಿ ನಗರದಲ್ಲಿ 103 ಕೊಳಚೆ ಪ್ರದೇಶಗಳಿವೆ. ಪ್ರತಿ ಏರಿಯಾದಲ್ಲಿ ಅನಧಿಕೃತ ಬ್ರಾಂದಿ ಮಾರಾಟ ಅಂಗಡಿಗಳಿವೆ. ಇಲ್ಲಿ ವಾಸಿಸುವವರ ಜೀವನ ನರಕಯಾತನೆ. ಮನೆ-ಮನೆ ಓಣಿ-ಓಣಿಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡ್ತಾರೆ. ಹೆಣ್ಣುಮಕ್ಕಳು ಕೂಲಿ ಮಾಡಿಕೊಂಡು ಬಂದ ಹಣ ಗಂಡಸರ ಕುಡಿತಕ್ಕಾಗುತ್ತದೆ ಎಂದರು.
ಹೊನ್ನಾಳಿಯ ದಸಂಸ ಪದಾಧಿಕಾರಿ ಮಂಜುನಾಥ ಹೊನ್ನಾಳಿ ಮಾತನಾಡಿ, ಹೊನ್ನಾಳಿ ತಾಲ್ಲೂಕಿನ ಹಳ್ಳಿ-ಹಳ್ಳಿಗಳಲ್ಲಿಯೂ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಅದರಲ್ಲಯೂ ಎಸ್‌ಸಿಎಸ್‌ಟಿ ಕಾಲನಿಗಳಲ್ಲಿ ಈ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರು.
ಲೋಕಿಕೆರೆ ಹನುಮಂತಪ್ಪ ಮಾತನಾಡಿ, ಲೋಕಿಕೆರೆಗೆ ಔಟ್‌ಪೋಸ್ಟ್ ಬೇಕು. ಕೊನೇ ಪಕ್ಷ ಇಬ್ಬರು ಪೋಲಿಸ್ ಕಾನ್ಸ್‌ಟೇಬಲ್‌ಗಳನ್ನಾದರೂ ನೀಡಿ ಎಂದರು. ಬೀಟ್ ಪೋಲಿಸರು ಒಂದೆರಡು ಬಾರಿ ಬಂದರೆ ಜಾಗೃತಿ ಇರುತ್ತದೆ ಎಂದರು.
ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ, ಸಂಬಂಧಿಸಿದ ಎಲ್ಲರ ಸಮಸ್ಯೆಗಳನ್ನು ಗಮನ ಹರಿಸಲಾಗುವುದು. ಎಲ್ಲೆಡೆ ಔಟ್‌ಪೋಸ್ಟ್ ಕೊಡಲು ಬರುವುದಿಲ್ಲ. ಹಾಗೂ ನಾಕಾ ಬಂದಿ ವ್ಯವಸ್ಥೆಗೆ ನಮ್ಮದೇ ಆದ ಬೇರೆ ಬೇರೆ ಯೋಜನೆಗಳಿರುತ್ತವೆ. ಏರಿಯಾಗಳಿಗೆ ಬೀಟ್ ಆಫೀಸರ್ ನೇಮಕ ಮಾಡಿದ್ದೇವೆ. ತಮ್ಮ ದೂರುಗಳನ್ನು ಅವರಿಗ ಸಲ್ಲಿಸಿ ಹಾಗೂ ಕೆಟಿಜೆ ನಗರದ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಸಂಬಂಧಿಸಿದ ಪಿಎಸ್‌ಐ ಗೆ ಸೂಚಿಸಿದರು.