×
Ad

ಮಡಿಕೇರಿ : ಸಹಕಾರ ಯೂನಿಯನ್ ಅಧ್ಯಕ್ಷರ ವಿರುದ್ಧ ಅಸಮಾಧಾನ

Update: 2017-06-07 18:17 IST

ಮಡಿಕೇರಿ, ಜೂ.7 :ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮಾಸಿಕ ಮತ್ತು ತ್ರೈಮಾಸಿಕ ಸಭೆಯನ್ನು ನಡೆಸದೇ ಇರುವ ಅಧ್ಯಕ್ಷ ಮನು ಮುತ್ತಪ್ಪ ಅವರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಹಕಾರ ಯೂನಿಯನ್ ನಿರ್ದೇಶಕರಾದ ಮಂಡುವಂಡ ಜೋಯಪ್ಪ ಸಹಕಾರ ಸಂಘಗಳ ಮೈಸೂರು ವಿಭಾಗದ ಜಂಟಿ ನಿಬಂಧಕರಿಗೆ ದೂರು ನೀಡಿದ್ದಾರೆ.

2014 ರ ತಿದ್ದುಪಡಿ ಬೈಲಾದ ಪ್ರಕಾರ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು. ಆದರೆ ಅಧ್ಯಕ್ಷರು ಮೂರು ತಿಂಗಳು ಕಳೆದಿದ್ದರೂ ಸಭೆಯನ್ನು ನಡೆಸಿಲ್ಲ ಮತ್ತು ಲೆಕ್ಕಪತ್ರ ಮಂಡಿಸಿಲ್ಲ ಎಂದು ಜೋಯಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.
ಮುಂದಿನ ಕಾರ್ಯಕ್ರಮಗಳ ಬಗ್ಗೆ ಅಥವಾ ಸಹಕಾರ ಸಂಸ್ಥೆಗಳ ಬೆಳವಣಿಗೆಯ ಕುರಿತು ಚರ್ಚಿಸಲು ಸಭೆ ನಡೆಸುವುದು ಅಧ್ಯಕ್ಷರಾದವರ ಕರ್ತವ್ಯವಾಗಿದೆ. ಆದರೆ ಅಧ್ಯಕ್ಷರು ರಾಜಕೀಯ ಪಕ್ಷ ಮಾತ್ರವಲ್ಲದೆ ವಿವಿಧ ಸಂಘ, ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳಲ್ಲಿರುವುದರಿಂದ ಸಭೆ ನಡೆಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಹುದ್ದೆಗಳು ಹೆಚ್ಚಾಯಿತು ಎನ್ನುವ ಕಾರಣಕ್ಕಾಗಿ ಹಾಲಿ ಅಧ್ಯಕ್ಷರು ಈ ಹಿಂದೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಸಹಕಾರ ಯೂನಿಯನ್‌ಗೆ ಚುನಾವಣೆ ನಡೆಯುವಂತೆ ನೋಡಿಕೊಂಡಿದ್ದರು. ಆದರೆ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನನ್ನನ್ನು ಸೋಲುವಂತೆ ಮಾಡಿದ್ದರು. ಆ ಮೂಲಕ ಅತಿ ಕಾಳಜಿಯಿಂದ ಯೂನಿಯನ್‌ನ ಬೆಳವಣಿಗೆಗಾಗಿ ತಯಾರಿಗಿದ್ದ ನನ್ನನ್ನು ಸೋಲಿಸಿದ ಅಧ್ಯಕ್ಷರು ಸಹಕಾರ ಕ್ಷೇತ್ರಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜಿಲ್ಲೆಯ 295 ಸಹಕಾರ ಸಂಘಗಳು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದ್ದು, ಇಂಥ ಜವಬ್ದಾರಿಯುತ ಸಂಘದ ಸಭೆ ನಡೆಸದೆ ನಿರ್ಲಕ್ಷ್ಯ ಮನೋಭಾವನೆ ತಾಳಿರುವುದು ಖಂಡನೀಯವೆಂದು ಜೋಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2017 ಮಾರ್ಚ್ 6 ರಂದು ಮಾಸಿಕ ಸಭೆಯನ್ನು ನಡೆಸಲಾಗಿತ್ತು. ಇದಾದ ನಂತರ ಇಲ್ಲಿಯವರೆಗೆ ಅಧ್ಯಕ್ಷರು ಯಾವುದೇ ಸಭೆಗಳನ್ನು ನಡೆಸಿರುವುದಿಲ್ಲ. ಆದ್ದರಿಂದ ಸಹಕಾರ ಸಂಘಗಳ ಜಂಟಿ ನಿಬಂಧಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಡುವಂಡ ಜೋಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News