ಜೂ.11:ಮೈಸೂರಿನಲ್ಲಿ ಸಂವಿಧಾನ ಉಳಿಸಿ ಸಮಾವೇಶ
ಹಾಸನ,ಜೂ.7: ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ಜೂನ್ 11 ರಂದು ರಾಜ್ಯ ಮಟ್ಟದ ಸಂವಿಧಾನ ಉಳಿಸಲು ದೇಶಪ್ರೇಮಿ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ಭಾರತ ಸಮ್ಯುನಿಸ್ಟ್ (ಮಾಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಂವಿಧಾನದ ಮೂಲ ಆಶಯಗಳು ಮತ್ತು ತತ್ವಗಳ ಮೇಲೆ ತೀರ್ವವಾದ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಸಂಸತ್ ಸದಸ್ಯರು ಹಾಗೂ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿಯವರು ನೆರವೇರಿಸಲಿದ್ದಾರೆ. ಭಾರತದ ಎಲ್ಲಾ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಆಲೋಚನೆಯ, ಅಭಿವ್ಯಕ್ತಿಯ, ನಂಬಿಕೆ, ವಿಶ್ವಾಸ ಮತ್ತು ಆಚರಣೆಯ ಸ್ವಾತಂತ್ಯ; ಸಾಮಾಜಿಕ ಸ್ಥಾನ ಮತ್ತು ಅವಕಾಶಗಳಲ್ಲಿ ಸಮಾನತೆ ನೀಡುವುದು ಹಾಗೂ ಪ್ರತೀ ವ್ಯಕ್ತಿಯ ಘನತೆಯನ್ನು ಖಾತ್ರಿಪಡಿಸಿ, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ನಮ್ಮ ದೇಶದ ಸಂವಿಧಾನದ ಪ್ರಸ್ಥಾವನೆಯಲ್ಲಿ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಘೋಷಿಸಲಾಗಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಸಂವಿಧಾನದ ಮೂಲ ಆಶಯಗಳು ಹಾಗೂ ತತ್ವಗಳ ಮೇಲೆ ಅತ್ಯಂತ ತೀರ್ವತೆರನಾದ ದಾಳಿಗಳು ಆರಂಭವಾಗಿವೆ. ಜಾತ್ಯಾತೀತ ಮತ್ತು ಒಕ್ಕೂಟ ತತ್ವಗಳನ್ನು ಗಾಳಿಗೆ ತೂರಲಾಗಿದೆ. ದೇಶದಲ್ಲಿ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ದೇಶದ ಸಾರ್ವಜನಿಕ ಆಸ್ತಿಯಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಉದ್ಯಮಿಗಳಿಗೆ ಕಡಿಮೆ ಬೆಲೆಗೆ ಮಾರಾಟಮಾಡಿ ದೇಶದ ಜನರ ಸಂಪತ್ತನ್ನು ಕೆಲವೇ ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ನೀಡಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರುವಾಗ ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಮತ್ತು ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ, ಸಂಪರ್ಕಗಳನ್ನು ದೇಶದ ಮೂಲೆ ಮೂಲೆಗಳಲ್ಲಿ ಸಿಗುವಂತೆ ಮಾಡುತ್ತೇನೆ, ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಕಡಿಮೆ ಮಾಡುತ್ತೇನೆ, ಭ್ರಷ್ಟಾಚಾರ ತಡೆಗಟ್ಟುತ್ತೇನೆ ಹಾಗೂ ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ಒಳ್ಳೆಯ ದಿನಗಳನ್ನು ತರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ನರೇಂದ್ರ ಮೋದಿಯವರ ಮೂರು ವರ್ಷದ ಆಳ್ವಿಕೆಯಲ್ಲಿ ಇರುವ ಉದ್ಯೋಗಾವಕಾಶಗಳೂ ನಾಶವಾಗಿವೆ. ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರೀಕರಣಗೊಂಡು ಸಂಪೂರ್ಣವಾಗಿ ಖಾಸಗೀ ಬಂಡಬಾಳಿಗರ ಹಿಡಿತಕ್ಕೆ ಸಿಲುಕಿವೆ. ನೋಟು ಅನಾಣ್ಯೀಕರಣದಂತ ಅತ್ಯಂತ ಅವೈಜ್ಞಾನಿಕ ಹಾಗೂ ಅತಾರ್ಕಿಕವಾದ ಆರ್ಥಿಕ ತೀರ್ಮಾನಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯೇ ಕುಸಿದು ಜಿಡಿಪಿ ಕುಸಿದಿದ್ದು, ಕೋಟ್ಯಾಂತರ ಉದ್ಯೋಗಗಳು ನಾಶವಾಗಿವೆ. ದಲಿತರಿಗೆ ಹಾಗೂ ಹಿಂದುಳಿದವರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಿದ್ದ ಮೀಸಲಾತಿಯ ಅವಕಾಶಗಳು ಕ್ಷೀಣುಸುತ್ತಿವೆ ಎಂದು ಆತಂಕವ್ಯಕ್ತಪಡಿಸಿದರು.
ಜನರಿಗೆ ರಕ್ಷಣೆ ನೀಡದ ಸರ್ಕಾರ ಜಾನುವಾರುಗಳಿಗೆ ರಕ್ಷಣೆ ನೀಡುವ ಹೆಸರಿನಲ್ಲಿ ಜಾನುವಾರು ಸಾಗಾಣಿಕೆ ಹಾಗೂ ಮಾರಾಟದ ಮೇಲೆ ನಿರ್ಬಂದ ಹೇರುವ ನೆಪದಲ್ಲಿ ದೇಶದ ಬಹುಸಂಖ್ಯಾತ ಜನರ ಆಹಾರ ಕ್ರಮದ ಮೇಲೆ ದಾಳಿ ಮಾಡಿದೆ. ಈ ಕಾಯ್ದೆಯಿಂದ ದೇಶದ ಕೃಷಿಯೇ ನಾಶವಾಗಲಿದೆ. ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಕೂಡ ಈ ಕಾಯ್ದೆಯ ಬಗ್ಗೆ ಎಡಬಿಡಂಗಿ ನಿಲುವು ತಳೆದಿರುವ ಪರಿಣಾಮ ರಾಜ್ಯದ ರೈತರು ಹಾಗೂ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷವು ದೇಶದ ಸಂವಿಧಾನದ ಉಳಿವಿಗಾಗಿ ದೇಶದಾದ್ಯಂತ ಜತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳ ಐಕ್ಯತೆಗಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 11ರಂದು ಮೈಸೂರಿನಲ್ಲಿ ನಡೆಯುತ್ತಿರುವ ಸಂವಿಧಾನ ಉಳಿಸಲು ರಾಜ್ಯ ಮಟ್ಟದ ದೇಶಪ್ರೇಮಿ ಸಮಾವೇಶ ಅತ್ಯಂತ ಪ್ರಮುಖವಾಗಿದ್ದು, ಜಿಲ್ಲೆಯ ಎಲ್ಲಾ ಜಾತ್ಯಾತೀತ, ಪ್ರಗತಿಪರ ಹಾಗೂ ಸಂವಿಧಾನಪರ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಸಮಾವೇಶಕ್ಕೆ ಭಾಗವಹಿಸಬೇಕೆಂದು ಇದೆ ವೇಳೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತ ಸಮ್ಯುನಿಸ್ಟ್ (ಮಾಕ್ಸ್‌ವಾದಿ) ಜಿಲ್ಲಾ ಸಮಿತಿ ಸದಸ್ಯರು ಜಿ.ಪಿ. ಸತ್ಯನಾರಾಯಣ, ಸ್ಥಳೀಯ ಸಮಿತಿ ಕಾರ್ಯದರ್ಶಿ (ಹೆಚ್.ಆರ್. ನವೀನ್‌ಕುಮಾರ್, ಜಿಲ್ಲಾ ಸಮಿತಿ ಸದಸ್ಯರು ಎಂ.ಜಿ. ಪೃಥ್ವಿ, ಜಿಲ್ಲಾ ಸಮಿತಿ ಸದಸ್ಯರು ಡಿ.ಎಲ್. ರಾಘವೇಂದ್ರ, ಕೆ.ಎಸ್. ಮಂಜುನಾಥ್ ಉಪಸ್ಥಿತರಿದ್ದರು.