ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿ ಪರಿಹಾರ: ರಮೇಶ್‌ಕುಮಾರ್

Update: 2017-06-07 14:45 GMT

ಬೆಂಗಳೂರು, ಜೂ.7: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಕ್ರಿಮಿನಾಶಕ ಸಿಂಪಡಣೆಯಿಂದ ಸಂತ್ರಸ್ತರಾಗಿರುವವರಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಬಿಜೆಪಿ ಸದಸ್ಯ ಸುನೀಲ್‌ಕುಮಾರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಕೇರಳ ಸರಕಾರವು ಎಂಡೋಸಲ್ಫಾನ್ ಪೀಡಿತರಿಗೆ ಯಾವ ರೀತಿಯ ಪರಿಹಾರ ನೀಡಿದೆ ಎಂಬ ಮಾಹಿತಿಯನ್ನು ತರಿಸಿಕೊಂಡು, ನಮ್ಮ ರಾಜ್ಯದಲ್ಲಿಯೂ ಅದೇ ಮಾದರಿಯನ್ನು ಅನುಸರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಎಂಡೋಸಲ್ಫಾನ್ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳದಲ್ಲೆ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿ, ಜಿಲ್ಲಾಡಳಿತದ ಸಮ್ಮುಖದಲ್ಲೆ ಸೂಕ್ತ ಪರಿಹಾರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸಹಕಾರಿಯಾಗುವಂತೆ ವಿಶೇಷ ಆಂಬ್ಯುಲೆನ್ಸ್ ಗಳನ್ನು ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ರಮೇಶ್‌ಕುಮಾರ್ ಹೇಳಿದರು.

ಹೈಕೋರ್ಟ್ ಹಾಗೂ ರಾಜ್ಯ ಸರಕಾರದ ಆದೇಶದಂತೆ ಶೇ.25-59ರವರೆಗೆ ವಿಕಲಚೇತನರೆಂದು ಗುರುತಿಸಲ್ಪಟ್ಟ 1974 ಸಂತ್ರಸ್ತರಿಗೆ ಕಂದಾಯ ಇಲಾಖೆಯಿಂದ ಮಾಸಿಕ 1500 ರೂ.ಮತ್ತು ಶೇ.60ರಷ್ಟು ಮೇಲ್ಪಟ್ಟು ವಿಕಲಚೇತನರೆಂದು ಗುರುತಿಸಲ್ಪಟ್ಟ 4108 ಸಂತ್ರಸ್ತರಿಗೆ ಮಾಸಿಕ 3000 ರೂ.ನೀಡಲಾಗುತ್ತಿದೆ. ಶೇ.25ಕ್ಕಿಂತ ಕಡಿಮೆ ವಿಕಲಚೇತನರಾದ 868 ಫಲಾನುಭವಿಗಳಿಗೆ ಎಲ್ಲ ರೀತಿಯ ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಎಂಡೋಸಲ್ಫಾನ್ ಸಂತ್ರಸ್ತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಶುಲ್ಕ ರಹಿತ ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಳ್ಳ ಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಖಾಯಿಲೆಗೊಳಗಾದವರಿಗೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯವರಿಗೆ ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ಅವರೊಂದಿಗೆ ಪ್ರಯಾಣಿಸುವ ಒಬ್ಬ ಸಹಾಯಕರಿಗೆ ಆಸ್ಪತ್ರೆಗಳಿಗೆ ಹೋಗಿ ಬರಲು ಕೆಎಸ್ಸಾರ್ಟಿಸಿ ವತಿಯಿಂದ ಉಚಿತ ಬಸ್‌ಪಾಸ್‌ಗಳನ್ನು ವಿತರಿಸಲಾಗಿದೆ ಎಂದು ರಮೇಶ್‌ಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ತಾಲೂಕು ಆಸ್ಪತ್ರೆಗಳಲ್ಲಿ ಪ್ರಸಕ್ತ ಸಾಲಿನ ಮಾರ್ಚ್‌ನಿಂದ ಫಿಸಿಯೋಥೆರಪಿ ಕೇಂದ್ರಗಳನ್ನು ಹಾಗೂ ವಿಟ್ಲ, ಬೆಳ್ಳಾರೆ, ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ 4 ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ಬೆಳ್ತಂಗಡಿ ತಾಲೂಕಿನ ಉಜಿರೆಯ ಕೆಎಫ್‌ಡಿ ಆಸ್ಪತ್ರೆ ಕಟ್ಟಡದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೌಶಲ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಪ್ರಸಕ್ತ ಸಾಲಿನ ಜ.17ರಂದು ನಡೆದ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿ ಸೂಚಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ರಮೇಶ್‌ಕುಮಾರ್ ಹೇಳಿದರು.

 ಎಂಡೋಸಲ್ಫಾನ್ ಕ್ರಿಮಿನಾಶಕವನ್ನು ಉತ್ಪಾದನೆ ಮಾಡಿದವರು ಯಾರು, ಅದನ್ನು ಬಳಸಲು ಸಲಹೆ ನೀಡಿದವರು ಯಾರು ಎಂಬ ವಿಚಾರವು ಬೆಳಕಿಗೆ ಬರಬೇಕಿದೆ. ಇಂತಹ ಕ್ರಿಮಿನಾಶಕ ಬಳಕೆ ಮಾಡಿದರೆ, ಅದರಿಂದ ಆಗಬಹುದಾದ ಪರಿಣಾಮಗಳ ಕಲ್ಪನೆ ಉತ್ಪಾದಕರಿಗೆ, ವಿಜ್ಞಾನಿಗಳಿಗೆ ಇರಬೇಕಿತ್ತು ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಎಂಡೋಸಲ್ಫಾನ್ ಕ್ರಿಮಿನಾಶಕ ಬಳಕೆಯನ್ನು ನಿಷೇಧಿಸಿದ ಬಳಿಕ, ದಾಸ್ತಾನಿದ್ದ ಕ್ರಿಮಿನಾಶಕವನ್ನು ಕರ್ನಾಟಕ ಹಾಗೂ ಕೇರಳ ಗಡಿಭಾಗದಲ್ಲಿನ ಪಾಳು ಬಾವಿಗಳಲ್ಲಿ ಹಾಕಿ ಮುಚ್ಚಲಾಗಿದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸುನಿಲ್‌ಕುಮಾರ್ ಮಾಡಿದ ಮನವಿಗೆ ಸ್ಪಂದಿಸಿದ ರಮೇಶ್‌ಕುಮಾರ್, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಆದಷ್ಟು ಶೀಘ್ರದಲ್ಲೆ ವರದಿ ಕೈ ಸೇರುವ ನಿಟ್ಟಿನಲ್ಲಿ ತನಿಖೆಗೆ ಸೂಚಿಸಲಾಗುವುದು ಎಂದರು.

ಇದಕ್ಕೂ ಮುನ್ನ ಚರ್ಚೆ ಆರಂಭಿಸಿದ ಬಿಜೆಪಿ ಸದಸ್ಯ ಸುನಿಲ್‌ಕುಮಾರ್, ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಸುಮಾರು 10 ಸಾವಿರದಷ್ಟಿರಬಹುದು. ಅವರಿಗೆಲ್ಲ ಕೇರಳ ಮಾದರಿಯಲ್ಲಿ 5 ಲಕ್ಷ ರೂ.ಪರಿಹಾರ ಹಾಗೂ 30 ಕೆಜಿ ಪೌಷ್ಠಿಕಾಂಶಯುಕ್ತ ಆಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಚರ್ಚೆಯಲ್ಲಿ ಬಿಜೆಪಿ ಸದಸ್ಯರಾದ ಅಂಗಾರ, ಸಿ.ಟಿ.ರವಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News