ಜಿಪಂ ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ಪ್ರಸ್ತಾವ

Update: 2017-06-07 17:11 GMT

 ಶಿವಮೊಗ್ಗ, ಜೂ. 7: ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 144ನೆ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವ ಪ್ರಸ್ತಾವಕ್ಕೆ ಪೊಲೀಸ್ ಇಲಾಖೆ ಕೂಡ ಸಹಮತ ವ್ಯಕ್ತಪಡಿಸಲು ನಿರ್ಧರಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಖಚಿತ ಪಡಿಸಿದ್ದಾರೆ.


  ನಿಷೇಧಾಜ್ಞೆಗೆ ಸಹಮತ ವ್ಯಕ್ತಪಡಿಸುವ ನಿರ್ಧಾರದ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಪತ್ರ ಇನ್ನೂ ಜಿಲ್ಲಾಡಳಿತದ ಕೈ ಸೇರಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕೃತ ಪತ್ರ ಕೈ ಸೇರಿದ ನಂತರವಷ್ಟೆ ಜಿಲ್ಲಾಡಳಿತದ ನಿರ್ಧಾರ ವೆನೆಂಬುವುದು ಪ್ರಕಟಿಸುವುದಾಗಿ ಜಿಲ್ಲಾಡಳಿತದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಅಭಿಪ್ರಾಯ ಕೇಳಲಾಗಿತ್ತು: ಇತ್ತೀಚೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ. ಕೆ. ರಾಕೇಶ್‌ಕುಮಾರ್ ಜಿಪಂ ಕಚೇರಿ ಆವರಣದಲ್ಲಿ 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳುಹಿಸಿದ್ದರು. ಈ ಕೋರಿಕೆಯ ಪರೀಶಿಲನೆ ನಡೆಸಿದ ಡಿ.ಸಿ. ಡಾ. ಎಂ. ಲೋಕೇಶ್, ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದರು. ಜಿಪಂ ಕಚೇರಿ ಆವರಣದಲ್ಲಿ ನಿರಂತರ ನಿಷೇಧಾಜ್ಞೆ ವಿಧಿಸುವಂತಹ ಪರಿಸ್ಥಿತಿಯಿದೆಯೇ? ಎಂಬುವುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.ಈ ನಡುವೆ ಪೊಲೀಸ್ ಇಲಾಖೆಯು, ಜಿಪಂ ಕಚೇರಿ ಆವರಣದಲ್ಲಿ 144 ನೇ ಕಲಂ ಅನ್ವಯ ನಿಷೇಧಾಜ್ಞೆ ಹೇರಲು ಸಹಮತ ವ್ಯಕ್ತಪಡಿಸಿದೆ. ಇದನ್ನು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಖಚಿತ ಪಡಿಸಿದ್ದಾರೆ.

ಪೊಲೀಸ್ ಇಲಾಖೆಯ ಈ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಅಂಗೀಕರಿಸಿ ನಿಷೇಧಾಜ್ಞೆ ಜಾರಿಗೊಳಿಸಲಿದ್ದಾರಾ? ಅಥವಾ ನಿಷೇಧಾಜ್ಞೆ ವಿಧಿಸದಿರುವ ತೀರ್ಮಾನ ಕೈಗೊಳ್ಳಲಿದ್ದಾರಾ? ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ. ‘ನಿಷೇಧಾಜ್ಞೆಗೆ ಶಿಫಾರಸು ಮಾಡಲಾಗುತ್ತಿದೆ’

ಜಿಪಂ ಕಚೇರಿ ಆವರಣದಲ್ಲಿ ಸಿಆರ್‌ಪಿಸಿ ಕಲಂ 144 ರ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸುವ ಪ್ರಸ್ತಾವದ ಕುರಿತಂತೆ ಜಿಲ್ಲಾಡಳಿತ ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದರ ಬಗ್ಗೆ ಬುಧವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಮಾತನಾಡಿದರು.

’ಜಿ.ಪಂ. ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವುದಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿಷೇಧಾಜ್ಞೆ ವಿಧಿಸುವುದರಿಂದ ಕಚೇರಿ ಕೆಲಸ ಕಾರ್ಯಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪತ್ರಿಕ್ರಿಯೆ ನೀಡಿದ್ದಾರೆ.
ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಜಿಲ್ಲಾಧಿಕಾರಿ?
ಜಿಪಂ ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವಂತೆ ಕುರಿತಂತೆ ಜಿಲ್ಲಾಧಿಕಾರಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ. ನಿಷೇಧಾಜ್ಞೆ ವಿಧಿಸುವ ಸಿಇಓ ಡಾ. ಕೆ. ರಾಕೇಶ್‌ಕುಮಾರ್‌ರ ಅಭಿಪ್ರಾಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಯೂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಅಂತಿಮ ನಿರ್ಧಾರ ಜಿಲ್ಲಾಧಿಕಾರಿಗಳೇ ಕೈಗೊಳ್ಳಬೆಕಾಗಿದೆ.

ಪೊಲೀಸ್ ಇಲಾಖೆಯ ಅಭಿಪ್ರಾಯದ ಪತ್ರ ಅಧಿಕೃತವಾಗಿ ಕೈ ಸೇರಿದ ನಂತರ ಡಿ.ಸಿ. ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News