ಜಾನುವಾರು ವ್ಯಾಪಾರದ ಮೇಲಿನ ನಿರ್ಬಂಧ ಹಿಂಪಡೆಯಿರಿ: ಪಿಎಫ್ಐ

Update: 2017-06-07 17:46 GMT

ಹೊಸದಿಲ್ಲಿ, ಜೂ. 7: ಕೇಂದ್ರ ಸರಕಾರವು ಜಾನುವಾರು ವ್ಯಾಪಾರದ ಮೇಲೆ ಹೇರಿರುವ ಹೊಸ ನಿರ್ಬಂಧವನ್ನು ಸಂಪೂರ್ಣವಾಗಿ ಮತ್ತು ಕೂಡಲೇ ಹಿಂಪಡೆಯಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನ್ಯಾಷನಲ್ ಸೆಕ್ರೇಟರಿಯೇಟ್ ಸಭೆ ಆಗ್ರಹಿಸಿದೆ.

ಒಂದೆಡೆ ಲಕ್ಷಾಂತರ ಬಡ ಜನರ ಜೀವನೋಪಾಯವನ್ನು ನಾಶಪಡಿಸುವುದು ಮಾತ್ರವಲ್ಲದೇ, ಮೊದಲೇ ವಿನಾಶಕಾರಿ ಅನಾಣ್ಯೀಕರಣದ ದುಷ್ಪರಿಣಾಮಕ್ಕೊಳಗಾಗಿರುವ ದೇಶದ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ಮತ್ತಷ್ಟು ತಡೆಯಾಗಲಿರುವ ಈ ನಡೆಯು ಸ್ಪಷ್ಟವಾಗಿ ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ.

ಜಾನುವಾರು ವ್ಯಾಪಾರಸ್ಥರ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂಬ ವಿವರಣೆಯು, ದನದ ಮಾಂಸದ ಮೇಲಿನ ನಿರ್ಬಂಧವನ್ನು ಪಾಲಿಸದ ಈಶಾನ್ಯ ಮತ್ತು ದಕ್ಷಿಣದ ಕೆಲವು ರಾಜ್ಯಗಳ ಜನರನ್ನು ಸಂತುಷ್ಟಗೊಳಿಸುವ ತಂತ್ರ ಮಾತ್ರವಾಗಿದೆ. ವಾಸ್ತವದಲ್ಲಿ ಜಾನುವಾರು ವ್ಯಾಪಾರದ ಮೇಲಿನ ಈ ರೀತಿಯ ನಿರ್ಬಂಧವು ದನದ ಮಾಂಸದ ಮೇಲಿನ ನಿರ್ಬಂಧಕ್ಕೆ ಸಮಾನವಾಗಿದೆ. ಯಾಕೆಂದರೆ, ಇದರಿಂದಾಗಿ ಕೃಷಿಗೆ ಹೊರತು ಯಾವುದೇ ಇತರ ಉದ್ದೇಶಗಳಿಗಾಗಿ ಜಾನುವಾರುಗಳ ವ್ಯಾಪಾರವು ಅಸಾಧ್ಯವಾಗುತ್ತದೆ.

ಕೇಂದ್ರ ಸರಕಾರವು ಸೂಚಿಸಿದ ವಧೆಗಾಗಿ ಜಾನುವಾರುಗಳ ಕೊಂಡುಕೊಳ್ಳುವಿಕೆಯನ್ನು ನಿರ್ಬಂಧಿಸುವ ಕಾನೂನಿನ ಅನುಷ್ಠಾನಕ್ಕೆ ಮಧ್ಯಂತರ ತಡೆಯಾಜ್ಞೆ ಹೊರಡಿಸಿರುವ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಆದೇಶವನ್ನು ಸಭೆಯು ಪ್ರಶಂಸಿಸಿದೆ. ಕೇಂದ್ರದ ದನದ ಮಾಂಸ ನಿಷೇಧವನ್ನು ರಾಜ್ಯದಲ್ಲಿ ಕಾರ್ಯಗತಗೊಳಿಸುವುದಿಲ್ಲ ಎಂಬ ಕೇರಳ ಸರಕಾರದ ನಿರ್ಧಾರವನ್ನು ಸಭೆಯು ಸ್ವಾಗತಿಸಿದೆ. ರಾಜ್ಯ ಸರಕಾರವು ಜನರ ಭಾವನೆಗಳು ಮತ್ತು ದೇಶದ ಹಿತದ ತೀರ್ಮಾನವನ್ನು ಕೈಗೊಂಡಿದೆ.

ಈ ಮಧ್ಯೆ, ಉಚ್ಛ ನ್ಯಾಯಾಲಯ ಮತ್ತು ನ್ಯಾಯಾಧೀಶರಿಂದ ಬರುತ್ತಿರುವ ಅಸಂಬದ್ಧ ಹೇಳಿಕೆಗಳನ್ನೂ ಸಭೆಯು ಟೀಕಿಸಿದೆ. ನವಿಲು ಲೈಂಗಿಕ ಕ್ರಿಯೆ ನಡೆಸುವುದಿಲ್ಲ, ಬದಲಾಗಿ ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರನ್ನು ಸೇವಿಸಿ ಗರ್ಭ ಧರಿಸುತ್ತದೆ ಎಂಬ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಾಧೀಶರ ಹೇಳಿಕೆ ಇದರಲ್ಲೊಂದಾಗಿದೆ. ಇದೇ ರೀತಿಯ ತೀರ್ಪು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವೂ ನೀಡಿದೆ. ಕೇವಲ ತಂದೆ ತಾಯಿ ಉಪಸ್ಥಿತರಿರಲಿಲ್ಲ ಎಂಬ ಆಧಾರದ ಮೇಲೆ 25ರ ಹರೆಯದ ಮುಸ್ಲಿಮ್ ಮಹಿಳೆಯ ವಿವಾಹವನ್ನು ಅದು ರದ್ದುಪಡಿಸಿದೆ. ಈ ರೀತಿಯ ತೀರ್ಪುಗಳಿಂದ ನಮ್ಮ ನ್ಯಾಯ ವ್ಯವಸ್ಥೆಯು ನಗೆ ಪಾಡಲಿಗೀಡಾಗುತ್ತಿದೆ. ಈ ತೀರ್ಪು ನ್ಯಾಯದ ಕಳಕಳಿಯ ಹೊರತಾಗಿ ವೈಯಕ್ತಿಕ ಕಾರಣಗಳಿಂದ ಪ್ರೇರಿತವಾಗಿರುತ್ತದೆ.

ಸಹರಾನ್‌ಪುರದಲ್ಲಿ ಠಾಕೂರ್ ಸಮುದಾಯವು ದಲಿತರ ಮೇಲೆ ನಡೆಸುತ್ತಿರುವ ದಾಳಿಯ ಹೊಣೆಯನ್ನು ಸಭೆಯು ಬಿಜೆಪಿ ಮತ್ತು ಪ್ರಸಕ್ತ ಉತ್ತರ ಪ್ರದೇಶ ಸರಕಾರದ ಮೇಲೆ ಹೊರಿಸಿದೆ. ಜಿಆರ್‌ಪಿಯ ಜವಾನನೋರ್ವ ಬಿಜ್‌ನೌರ್‌ನಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಮುಸ್ಲಿಮ್ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಘಟನೆಯು ಅತ್ಯಂತ ಕಳವಳಕಾರಿಯಾಗಿದೆ.

ಹೊಸ ಸರಕಾರದಡಿಯಲ್ಲಿ ಯುಪಿಯಲ್ಲಿ ದಲಿತರು ಮತ್ತು ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಇತ್ತೀಚಿನ ದೌರ್ಜನ್ಯಗಳು, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ನಿಯಂತ್ರಣದಲ್ಲಿಲ್ಲ, ಬದಲಾಗಿ ಇದು ಹಿಂದುತ್ವ ಗೂಂಡಾಗಳ ಕೃಪೆಯ ಮೇಲಿದೆ ಎಂಬುದನ್ನು ಸಾಬೀತುಪಡಿಸಿದೆ.

ಜಾರ್ಖಂಡ್‌ನಲ್ಲಿ ಮಕ್ಕಳ ಅಪಹರಣದ ಆರೋಪ ಹೊರಿಸಿ ಹಿಂಸಾತ್ಮಕ ಗುಂಪು ನಾಲ್ವರು ಅಮಾಯಕ ಮುಸ್ಲಿಮರನ್ನು ಥಳಿಸಿ ಕೊಂದಿರುವ ಘಟನೆಯನ್ನು ಸಭೆಯು ತೀವ್ರವಾಗಿ ಖಂಡಿಸಿದೆ. ಈ ವೇಳೆ ಘಟನಾ ಸ್ಥಳದಲ್ಲಿದ್ದ ಪೊಲೀಸರು ತಮಾಷೆ ನೋಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ರೀತಿ ಹೆಚ್ಚುತ್ತಿರುವ ದಾಳಿಗಳು ಫ್ಯಾಶಿಸ್ಟ್ ಶಕ್ತಿಗಳ ಪ್ರಚೋದನಾಕಾರಿ ಭಾಷಣಗಳ ಕಾರಣದಿಂದಾಗಿ ದೇಶದಲ್ಲಿ ವ್ಯಾಪಿಸಿರುವ ಮುಸ್ಲಿಮ್ ವಿರೋಧಿ ದ್ವೇಷದ ವಾತಾವರಣದ ಫಲಿತಾಂಶವಾಗಿದೆ.

ಈ ಅಮಾನವೀಯ ಅಪರಾಧಗಳಲ್ಲಿ ಭಾಗಿಯಾಗಿರುವ ಪೊಲೀಸರು ಸೇರಿದಂತೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕೆಂದು ಸಭೆಯು ಒತ್ತಾಯಿಸಿದೆ.

ಚೆಯರ್‌ಮ್ಯಾನ್ ಇ.ಅಬೂಬಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವೈಸ್ ಚೆಯರ್‌ಮ್ಯಾನ್ ಒ.ಎಂ.ಎ. ಸಲಾಂ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಇ.ಎಂ. ಅಬ್ದುರ್ರಹ್ಮಾನ್, ಅಬ್ದುಲ್ ವಾಹಿದ್ ಸೇಠ್, ಕೆ.ಎಂ. ಶರೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News