×
Ad

ಹಣ ಗಳಿಕೆಯ ಆತುರದಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ : ಶ್ರೀಗೌತಮಾನಂದಜೀ ಮಹರಾಜ್

Update: 2017-06-08 17:57 IST

ಮಡಿಕೇರಿ, ಜೂ.8 :ಬದುಕಿಗೆ ಸುಖ ಶಾಂತಿ ನೆಮ್ಮದಿಯನ್ನು ಹೊಂದಲು ಬಡತನದಿಂದ ಹೊರ ಬರಬೇಕೆನ್ನುವ ಕಲ್ಪನೆ ಹಿಂದೆ ಇತ್ತು. ಪ್ರಸ್ತುತ ಬಡತನ ಸಾಕಷ್ಟು ಪ್ರಮಾಣದಲ್ಲಿ ಮರೆಯಾಗಿ ಹೆಚ್ಚಿನ ಹಣ ಗಳಿಕೆಯ ಆತುರದಲ್ಲಿ ನಮ್ಮೊಳಗಿನ ಶಾಂತಿ ಮರೆಯಾಗಿ ಅಶಾಂತಿ ನಿರ್ಮಾಣವಾಗಿದೆ ಎಂದು ಶ್ರೀ ರಾಮಕೃಷ್ಣ ಮಿಷನ್ನಿನ ಉಪಾಧ್ಯಕ್ಷರು ಹಾಗೂ ಚೆನ್ನೈ ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀಗೌತಮಾನಂದಜೀ ಮಹರಾಜ್ ಅಭಿಪ್ರಾಯಪಟ್ಟಿದ್ದಾರೆ.

 ನಗರದಲ್ಲಿರುವ ಶ್ರೀರಾಮಕೃಷ್ಣ ಮಿಷನ್ನಿನ ವೇದಾಂತ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ನವೀಕರಿಸಲ್ಪಟ್ಟ ಸಂಘದ ಭವನದಲ್ಲಿ ಶ್ರೀರಾಮಕೃಷ್ಣ ಪರಮಹಂಸರು-ಶಾರದಾಮಾತೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು. ನಂತರ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗೌತಮಾನಂದಜೀ ಮಹರಾಜ್ ಮಾತನಾಡಿದರು.

 ನೈಜವಾದ ಶಾಂತಿ ನಮ್ಮೊಳಗೇ ಇದ್ದು, ಅದನ್ನು ನಿರಂತರವಾದ ಪ್ರಾರ್ಥನೆ, ಧ್ಯಾನ, ಸತ್ಸಂಗಗಳ ಮೂಲಕ ಪಡೆಯಲು ಸಾಧ್ಯವಿದೆ. ನಮ್ಮೆಲ್ಲ ಕರ್ತವ್ಯಗಳ ನಡುವೆಯೂ ಆಂತರಿಕವಾದ ಶಾಂತಿಗಾಗಿ ಪ್ರಾರ್ಥನೆಗೆ ಅವಕಾಶವನ್ನು ನೀಡುವಂತೆ ಶ್ರೀ ಗೌತಮಾನಂದಜೀ ಮಹಾರಾಜ್ ಕರೆ ನೀಡಿದರು.
ಹೊರ ಪ್ರಪಂಚದ ಸತ್ಯಗಳ ಆವಿಷ್ಕಾರ ವಿಜ್ಞಾನವೆನಿಸಿಕೊಂಡರೆ, ನಮ್ಮೊಳಗಿನ ಸತ್ಯವನ್ನು ತೋರಿಸಿಕೊಡುವಂತದ್ದು ಧರ್ಮವಾಗಿದೆ. ಇಂತಹ ಆತ್ಮ ಸಾಕ್ಷಾತ್ಕಾರಕ್ಕೆ ಪಥವನ್ನು ತೋರಿಸಿಕೊಟ್ಟವರು ಶ್ರೀ ರಾಮಕೃಷ್ಣ ಪರಮಹಂಸರೆಂದು ಅವರು ತಿಳಿಸಿದರು.

ಶ್ರೀಗೌತಮಾನಂದಜೀ ಮಹರಾಜ್ ಅವರಿಗೆ ವೇದಾಂತ ಸಂಘದ ಅಧ್ಯಕ್ಷರಾದ ಕೆ.ಎಸ್. ದೇವಯ್ಯ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಪ್ರಮುಖರಾದ ಕೆ.ಪಿ.ಉತ್ತಪ್ಪ, ವೇದಾಂತ ಸಂಘದ ಮಾಜಿ ಕಾರ್ಯದರ್ಶಿಗಳಾದ ಕೆ.ಪಿ.ಬಾಲಸುಬ್ರಹ್ಮಣ್ಯ ಮತ್ತು ಚಿ.ನಾ.ಸೋಮೇಶ್ ಬಿನ್ನವತ್ತಳೆ ಸಲ್ಲಿಸಿ ಗೌರವವನ್ನು ಅರ್ಪಿಸಿದರು.

ಸಭೆಯ  ಮೊದಲು ನವೀಕೃತ ವೇದಾಂತ ಸಂಘದಲ್ಲಿ ಶ್ರೀ ರಾಮಕೃಷ್ಣ, ಶಾರದಾ ಮಾತೆ, ಶ್ರೀ ಸ್ವಾಮಿ ವಿವೇಕಾನಂದರ ಭಾವಚಿತ್ರಗಳನ್ನು ಅನಾವರಣಗೊಳಿಸಿದ ಶ್ರೀ ಗೌತಮಾನಂದಜೀ ಮಹರಾಜ್ ಅವರು ವಿಶೇಷ ಪೂಜೆ ಸಲ್ಲಿಸಿದರು.

 ಸಮಾರಂಭದಲ್ಲಿ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಶ್ರೀ ಬೋಧ ಸ್ವರೂಪಾನಂದಜೀ ಮಹರಾಜ್ ಹಾಗೂ ಶ್ರೀ ಆತ್ಮಾನಂದಜೀ ಮಹರಾಜ್, ಶ್ರೀ ಧರ್ಮಾನಂದಜೀ ಮಹರಾಜ್, ಶ್ರೀ ನಿತ್ಯಸ್ಥಾನಾನಂದಜೀ ಮಹರಾಜ್ ಸೇರಿದಂತೆ ಭಗವದ್ ಭಕ್ತರು ಪಾಲ್ಗೊಂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News