×
Ad

ಭೂಮಿ,ವಸತಿಗಾಗಿ ಹೋರಾಟ : ಜೂ.15 ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ

Update: 2017-06-08 18:02 IST

ಮಡಿಕೇರಿ, ಜೂ.8: ರಾಜ್ಯದಲ್ಲಿರುವ ಎಲ್ಲಾ ಬಡವರ್ಗಕ್ಕೆ ಭೂಮಿ ಮತ್ತು ವಸತಿಯ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿ ಜೂ.15 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮೂರನೇ ಹಂತದ ರಾಜ್ಯ ಮಟ್ಟದ ಹೋರಾಟವನ್ನು ನಡೆಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಿರ್ಧರಿಸಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಡಿ.ಎಸ್. ನಿರ್ವಾಣಪ್ಪ  , ಬೆಳಗಾವಿ ಅಧಿವೇಶನದ ಸಂದರ್ಭ ಸಮಿತಿಯು ಮಂಡಿಸಿದ ಹಕ್ಕೊತ್ತಾಯವನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲವೆಂದು ಆರೋಪಿಸಿದರು.

  ಬೆಳಗಾವಿಯಲ್ಲಿ ರಾಜ್ಯದ ವಿವಿಧೆಡೆಯ ಸುಮಾರು 3 ಸಾವಿರ ಮಂದಿ ಭೂಮಿ ಮತ್ತು ವಸತಿ ವಂಚಿತರು ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಭಾಷಣ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಡಜನರಿಗೆ ಬೇಸಾಯಕ್ಕೆ ಭೂಮಿ ವಾಸಕ್ಕೆ ಮನೆ ನೀಡುವುದು ಸರಕಾರದ ಆದ್ಯತೆಯೇ ಹೊರತು ಬಲಾಢ್ಯರಿಗೆ,  ಭೂಗಳ್ಳರಿಗೆ ಕಂಪೆನಿಗಳಿಗೆ ನೀಡುವುದು ಅಲ್ಲ ಎಂದು ಹೇಳಿದ್ದರು. ಆದರೆ ಆರು ತಿಂಗಳು ಕಳೆದಿದ್ದರೂ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

 ಜೂ.15 ರಿಂದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಹೋರಾಟ ನಡೆಯಲಿದೆ ಎಂದು ನಿರ್ವಾಣಪ್ಪ ತಿಳಿಸಿದರು.

ಸಮಿತಿಯ ಪ್ರಮುಖ ಹಾಗೂ ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅಮೀನ್ ಮೊಹ್ಸೀನ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಮಾತಿಗೂ ಸರಕಾರ ಬೆಲೆ ನೀಡುತ್ತಿಲ್ಲ ಎಂದು ಕಿಡಿಕಾರಿದರು. ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆಯನ್ನಲ್ಲ. ಆದರೂ ಸರಕಾರ ಅದನ್ನು ನೀಡಲು ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು.

 ವಸತಿರಹಿತರಿಗೆ ನಿವೇಶನ ಗುರುತಿಸುವ ಸಂದರ್ಭ ಆ ಪ್ರದೇಶದಲ್ಲಿ ಸ್ಮಶಾನಕ್ಕೂ ಜಾಗ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
 ಪಾಲೆಮಾಡು ವಸತಿ ರಹಿತರ ಹೋರಾಟ ಸಮಿತಿಯ ಮುಖಂಡ ಕೆ. ಮೊಣ್ಣಪ್ಪ ಮಾತನಾಡಿ, ನಿವೇಶನ ರಹಿತರಿಗೆ ಈಗ ವಾಸವಾಗಿರುವ ಸ್ಥಳಗಳಲ್ಲೇ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರು ಜಿಲ್ಲಾಡಳಿತಕ್ಕೆ ಆದೇಶಿಸಿದ್ದರೂ, ಜಿಲ್ಲಾಡಳಿತ ಅದನ್ನು ಕಡೆಗಣಿಸಿ ಸರಕಾರದ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. 94ಸಿ ಅಡಿ ಯಾವುದೇ ಅರ್ಜಿಗಳನ್ನು ವಿಲೇವಾರಿ ಮಾಡದೆ ಬಡಜನರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ ಎಂದು ಟೀಕಿಸಿದರು.

ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾಡಳಿತದ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News