ಸಿಪಿಐ(ಎಂ) ರಾಷ್ಟ್ರೀಯ ಕಾರ್ಯದರ್ಶಿ ಮೇಲೆ ಹಲ್ಲೆ ವಿರೋಧಿಸಿ ಪ್ರತಿಭಟನೆ
ತುಮಕೂರು.ಜೂ.8:ಕೇಂದ್ರ ಸರಕಾರದ ಜನವಿರೋಧಿ ಧೋರಣೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸುವ ವೇಳೆ ಪತ್ರಕರ್ತರ ಸೋಗಿನಲ್ಲಿದ್ದ ಕೆಲ ಸಂಘಪರಿವಾರದ ಕಾರ್ಯಕರ್ತರು ಸಿಪಿಐ(ಎಂ) ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ಇಂದು ಸ್ವಾತಂತ್ರ ಚೌಕದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ಸಿಪಿಐ(ಎಂ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅವರು,ರೈತರ ಸಾಲ ಮನ್ನ ಮಾಡಲು ಆಗದ, ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸೃಷ್ಠಿಸುವಲ್ಲಿ ವಿಫಲವಾಗಿರುವ ಹಾಗೂ ಚುನಾವಣೆಗೂ ಮುನ್ನಾ ನೀಡಿದ ಭರವಸೆಗಳನ್ನು ಈಡೇರಿಸಲಾಗದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳು ಎಲ್ಲಿ ಬಯಲಾಗುತ್ತವೋ ಎಂಬ ಭಯದಲ್ಲಿರುವ ಆರ್‌ಎಸ್‌ಎಸ್ ಕಾರ್ಯಕರ್ತರು ಪತ್ರಕರ್ತರ ಸೋಗಿನಲ್ಲಿ ಹಲ್ಲೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮೂರು ವರ್ಷಗಳ ಅವಧಿಯಲ್ಲಿ ಕೇವಲ ಪ್ರಚಾರದಲ್ಲಿ ಕಾಲ ಕಳೆಯುತ್ತಿದ್ದು,ದೇಶದ ಸೈನಿಕರು,ರೈತರು ಹಾಗೂ ಜನಸಾಮಾನ್ಯರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಸೈನಿಕರ ಬಗ್ಗೆ ಮಾತನಾಡುತ್ತ ಜನರನ್ನು ಬಾವಾನಾತ್ಮಕವಾಗಿ ಕೆರಳಿಸಿ ಓಟ್ ಬ್ಯಾಂಕ್ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ.ಆದರೆ ದೇಶದ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ ದೇಶ ಕಾಯುವ ಸೈನಿಕರೇ ಇಂದು ನಮಗೆ ಮೂಲಭೂತ ಸೌಲಭ್ಯಗಳನ್ನು ಕೊಡಿ ಎಂದು ಕೇಳಿಕೊಳ್ಳುವ ಹಂತಕ್ಕೆ ಬಂದಿದ್ದಾರೆ.ನೋಟು ಅಮಾನೀಕರಣದಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ ಸಾವಿರಾರು ಸಂಖ್ಯೆಯ ಜನ ಉದ್ಯೋಗಗಳಿಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಇವುಗಳ ಬಗ್ಗೆ ಗಮನ ಹರಿಸದ ಕೇಂದ್ರ ಸರಕಾರ ಮತ್ತು ಆರ್‌ಎಸ್‌ಎಸ್ ಸರ್ಕಾರದ ನೀತಿಗಳ ಬಗ್ಗೆ ಮಾತನಾಡುವವರ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಎನ್.ಸುಬ್ರಮಣ್ಯ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿ.ದರ್ಶನ್,ರಾಮಚಂದ್ರು,ಮುತ್ತುರಾಜ್,ತಿಮ್ಮೇಗೌಡ,ಉಬೇದುಲ್ಲಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.