×
Ad

ಪಡಿತರ ಚೀಟಿಗೆ ಹೆಸರು ಸೇರ್ಪಡೆಗಾಗಿ ಅಹೋರಾತ್ರಿ ಧರಣಿ

Update: 2017-06-08 19:39 IST

ಹುಳಿಯಾರು,ಜೂ.8:ಪಡಿತರ ಚೀಟಿ ಪಟ್ಟಿಯಿಂದ 500 ಫಲಾನುಭವಿಗಳ ಹೆಸರು ಕೈ ಬಿಟ್ಟಿರುವುದನ್ನು ವಿರೋಧಿಸಿ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ನೇತೃತ್ವದಲ್ಲಿ ನೂರಾರು ವಂಚಿತ ಪಡಿತರದಾರರು ಗುರುವಾರ ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

ದಸೂಡಿ ವ್ಯವಸಾಯ ಸಹಕಾರ ಸಂಘದಲ್ಲಿ 20 ತಕ್ಕೂ ಹೆಚ್ಚು ಹಳ್ಳಿಗಳ ಐನೂರಕ್ಕೂ ಹೆಚ್ಚು ಪಡಿತರ ಚೀಟಿಗಳಿವೆ. ಇವುಗಳಲ್ಲಿ ಬಹುತೇಕ ಕಾರ್ಡ್‌ಗಳಲ್ಲಿ ಫಲಾನುಭವಿಗಳ ಹೆಸರು ಕೈ ಬಿಟ್ಟು ಪಡಿತರ ನೀಡದೆ ಅನ್ನಭಾಗ್ಯ ಯೋಜನೆಯಿಂದ ಹೊರಗಿಟ್ಟಿದ್ದಾರೆ. ಕೆಲವೊಂದು ರೇಷನ್ ಕಾರ್ಡ್‌ಗಳಲ್ಲಿ ಕುಟುಂಬದ ಮುಖ್ಯಸ್ಥರೊಬ್ಬರನ್ನು ಬಿಟ್ಟು ಉಳಿದೆಲ್ಲರನ್ನೂ ಕೈ ಬಿಟ್ಟಿದ್ದಾರೆ.ಇದರಿಂದ ನೂರಾರು ಕುಟುಂಬಗಳು ಉಪವಾಸ ಇರುವಂತ್ತಾಗಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.

ದಸೂಡಿಯಿಂದ ಚಿಕ್ಕನಾಯ್ಕನಹಳ್ಳಿಗೆ ಮೂವತ್ತೈದು ಕಿ.ಮೀ.ದೂರವಿದ್ದು ಆಧಾರ್ ಎಂಟ್ರಿ ಮಾಡಿಸಿ ಹೆಬ್ಬೆಟ್ಟು ಕೊಟ್ಟುಬರಲು ನೂರಾರು ರೂ.ವೆಚ್ಚವಾಗುತ್ತದೆ.ಅಲ್ಲದೆ, ಆ ಇಡೀ ದಿನ ಕೂಲಿ ಸಹ ಇಲ್ಲದಾಗುತ್ತದೆ.ಆದರೂ ಕಾರ್ಡ್ ರದ್ದಾಗುತ್ತದೆಂಬ ಆತಂಕದಿಂದ ಒಬ್ಬೊಬ್ಬರು ಹತ್ತನ್ನೆರಡು ಬಾರಿ ಹೆಬ್ಬೆಟ್ಟು ಕೊಟ್ಟು ಬಂದರೂ ಜೂನ್ ಮಾಹೆಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಕೈ ಬಿಟ್ಟಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ದೂರಿದ್ದಾರೆ.

ಪ್ರಧಾನಮಂತ್ರಿ ಉಚಿತ ಅನಿಲ ಯೋಜನೆಗೆ ಹೆಸರು ನೊಂದಾಯಿಸಿದ ಅಷ್ಟೂ ಮಂದಿಗೆ ಇನ್ನೂ ಗ್ಯಾಸ್ ಕೊಡದಿದ್ದರೂ ಸೀಮೆಎಣ್ಣೆ ನಿಲ್ಲಿಸಿದ್ದಾರೆ. ಇದರಿಂದ ಅಡುಗೆ ಸ್ಟವ್‌ಗೆ, ರಾತ್ರಿ ಕರೆಂಟ್ ಹೋದಾಗ ದೀಪಕ್ಕೆ ಸೀಮೆಎಣ್ಣೆ ಇಲ್ಲದೆ ಹೆಚ್ಚು ಹಣ ಕೊಟ್ಟು ಬ್ಲಾಕ್‌ನಲ್ಲಿ ತರಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ದಸೂಡಿ ಕಂಪ್ಯೂಟರ್ ಆಪರೇಟರ್ ಅವರನ್ನು ಪ್ರಶ್ನಿಸಿದರೆ ತಮಗೇನೂ ಗೊತ್ತಿಲ್ಲ.ಅಲ್ಲದೆ ನಮಗಿನ್ನೂ ಕಂಪ್ಯೂಟರ್ ತರಬೇತಿ ಸಹ ಕೊಟ್ಟಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದು ವಿವರಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News