ಕಾರವಾರ: ಕುಸಿದು ಬಿದ್ದು ವಿದ್ಯಾರ್ಥಿ ಸಾವು
Update: 2017-06-08 22:49 IST
ಕಾರವಾರ, ಜೂ.8: ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜೊಯಿಡಾ ತಾಲೂಕಿನ ಮಲಕರ್ಣಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ. ಜೊಯಿಡಾ ತಾಲೂಕಿನ ಮಲಕಣಿ ಗ್ರಾಮದ ಕುಮಾರ್ ಸುಬ್ರಹ್ಮಣ್ಯ (10)ಮೃತಪಟ್ಟ ವಿದ್ಯಾರ್ಥಿ. ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.
ಇದನ್ನು ಗಮನಿಸಿದ ಶಾಲಾ ಶಿಕ್ಷಕರು ಪ್ರಾಥಮಿಕ ಆರೈಕೆ ಮಾಡಿದರಾದರು ಮಗು ಎಚ್ಚರಗೊಂಡಿರಲಿಲ್ಲ. ಆದ್ದರಿಂದ ಜೊಯಿಡಾದ ಸರಕಾರಿ ಆಸ್ಪತ್ರೆಗೆ ಶಿಕ್ಷಕ ಅರವಿಂದ ನಾಯ್ಕ ಮಗುವನ್ನು ತಕ್ಷಣ ದಾಖಲಿಸಿದ್ದರು. ಆದರೆ ಬಾಲಕ ಅಷ್ಟರಲ್ಲಾಗಲೆ ಮೃತಪಟ್ಟಿದ್ದ. ಈ ಬಗ್ಗೆ ಜೊಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ