×
Ad

​ನಿರೀಕ್ಷಿತ ಫಲಿತಾಂಶ ಪಡೆಯದ ಶಾಲೆಗಳ ವಿರುದ್ಧ ಕ್ರಮ

Update: 2017-06-08 23:11 IST

ಮಡಿಕೇರಿ, ಜೂ.8: ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರಸಕ್ತ (2017-18) ವರ್ಷದ ಎಸೆಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡು ಬರದಿದ್ದರೆ, ಅಂತಹ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಸರಕಾರಿ ಶಾಲೆಗಳು ಎಸೆಸೆಲ್ಸಿಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದಿದ್ದಲ್ಲಿ, ಅಂತಹ ಶಾಲೆಗಳ ಮುಖ್ಯೋಪಾಧ್ಯಾಯರ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.

ನಗರದ ಸಂತ ಮೈಕಲರ ಶಾಲೆಯಲ್ಲಿ ಗುರುವಾರ ಎಸೆಸೆಲ್ಸಿ ಫಲಿತಾಂಶ ಸಂಬಂಧಿಸಿದಂತೆ ಮಾಹಿತಿ ಪಡೆದು ಶೇ.100ರಷ್ಟು ಫಲಿತಾಂಶ ಪಡೆದಿರುವ ಶಾಲೆಯ ಮುಖ್ಯಸ್ಥರಿಗೆ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.


 ಮಾರ್ಚ್‌ನಲ್ಲಿ ನಡೆದ ಎಸೆಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ ಇನ್ನೂ ಉನ್ನತ ಸ್ಥಾನ ಪಡೆಯುವಂತಾಗಬೇಕು. ಜಿಲ್ಲೆಯ ಅನುದಾನಿತ ಕೆಲವು ಶಾಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಶೇ.50ಕ್ಕಿಂತ ಕಡಿಮೆ ಇದೆ. ಇಂತಹ ಆಡಳಿತದ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಅಂತಹ ಶಾಲೆಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ಯೋಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ವಸತಿ ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಕಡ್ಡಾಯವಾಗಿ ಬರಬೇಕು. ಆದರೆ ಕೆಲವು ವಸತಿ ಶಾಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಆದ್ದರಿಂದ ಅಂತಹ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಿಕ್ಷಣ ಸಂಸ್ಥೆಗಳು ಲಾಭ ಮಾಡುವ ಸಂಸ್ಥೆಗಳಲ್ಲ. ಬದಲಾಗಿ ಸೇವೆ ಮಾಡುವ ಸಂಸ್ಥೆಗಳಾಗಿವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಶಾಲೆಗಳಿಗೆ ಮಕ್ಕಳು ಸರಿಯಾಗಿ ಬರುವುದಿಲ್ಲ ಎಂಬುದನ್ನು ಹೇಳಬೇಡಿ. ಮಕ್ಕಳನ್ನು ಶಾಲೆಗೆ ಕರೆತರುವುದು ಹಾಗೂ ಪೋಷಕರಲ್ಲಿ ಮನವರಿಕೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಸರಕಾರ ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ಜಾರಿಗೊಳಿಸಿದೆ.

ಶಾಲೆಗಳಲ್ಲಿ ಕ್ಷೀರಭಾಗ್ಯ, ಶೂ ಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, ಬೈಸಿಕಲ್, ಹಾಗೆಯೇ ಶಾಲೆಗೆ ಪ್ರತಿದಿನ ವಿದ್ಯಾರ್ಥಿನಿಯರು ಹಾಜರಾಗಲು ಪ್ರೋತ್ಸಾಹ ಧನ ನೀಡಲಾಗುತ್ತದೆ ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಶಾಲೆಗೆ ವಿದ್ಯಾರ್ಥಿಗಳು ಬರುವುದಿಲ್ಲ ಎಂದು ಹೇಳಿದರೆ ಹೇಗೆ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಮಲ್ಲೇಸ್ವಾಮಿ, ಡಯಟ್ ಉಪನ್ಯಾಸಕ ಬೊಮ್ಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸರ್ವಶಿಕ್ಷಣ ಅಭಿಯಾನ ಅಧಿಕಾರಿ ಭಾಗ್ಯಲಕ್ಷ್ಮೀ ವಿಷಯ ಪರಿವೀಕ್ಷಕ ದೇವನಾಯಕ್, ಸಾವಿತ್ರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜೋಯಪ್ಪ, ಜಿಲ್ಲೆಯ ಎಲ್ಲಾ ಸರಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News