ಹೋಮ ಹವನ ಸರಕಾರದ ಕೆಲಸವಲ್ಲ

Update: 2017-06-08 18:58 GMT

ನಾಡಿನಲ್ಲಿ ಮಳೆಯೇ ಸುರಿಯದಿದ್ದಲ್ಲಿ ಮನುಷ್ಯನಿಗಂತೂ ಮಳೆಯನ್ನು ಸುರಿಸಲು ಸಾಧ್ಯವಿಲ್ಲ. ಇಂತಹ ಹೊತ್ತಲ್ಲಿ ಆತ ದೇವರಲ್ಲಿ ಮೊರೆ ಇಡುವುದು ವೌಢ್ಯವಾಗುವುದಿಲ್ಲ್ಲ. ಅದು ಅವನಿಗುಳಿದಿರುವ ಒಂದು ಭರವಸೆ. ಇಷ್ಟಕ್ಕೂ ಮಳೆ, ಚಳಿ, ಸೂರ್ಯ ಇವೆಲ್ಲವೂ ಮನುಷ್ಯನ ಸೃಷ್ಟಿಯಲ್ಲ. ಈ ಭೂಮಿಯಲ್ಲಿ ಮನುಷ್ಯನೆನ್ನುವ ಜೀವಿ ಕಾಣಿಸಿಕೊಳ್ಳುವ ಮೊದಲೇ ಅವೆಲ್ಲ ಅಸ್ತಿತ್ವದಲ್ಲಿತ್ತು. ಈವರೆಗೂ ಅವೆಲ್ಲದರ ಲಾಭವನ್ನು ಪಡೆದುಕೊಂಡಿರುವ ಮನುಷ್ಯ ಅದಕ್ಕಾಗಿ ಯಾವ ತೆರಿಗೆಯನ್ನೂ ಕಟ್ಟುತ್ತಿಲ್ಲ. ಯಾರೂ ಅವನಿಂದ ತೆರಿಗೆಯನ್ನು ಈವರೆಗೆ ಕೇಳಿಯೂ ಇಲ್ಲ.

ಇಂತಹ ಹೊತ್ತಿನಲ್ಲಿ ಮಳೆ ಸುರಿಯದಿದ್ದರೆ ಅವ್ಯಕ್ತ ಶಕ್ತಿಯ ಜೊತೆಗೇ ಮನುಷ್ಯ ಕಟ್ಟಕಡೆಗೆ ಕೈಯೊಡ್ಡಬೇಕಾಗುತ್ತದೆ. ಈ ಶಕ್ತಿಯ ಕುರಿತಂತೆ ನೂರಾರು ನಂಬಿಕೆಗಳಿವೆ. ತಾವು ನಂಬಿದ ರೀತಿಯಲ್ಲಿ ಮಳೆಗಾಗಿ ದೇವರಲ್ಲಿ ಮೊರೆ ಇಡಲು, ಈ ದೇಶದ ಸಂವಿಧಾನ ಪ್ರತಿಯೊಬ್ಬನಿಗೆ ಹಕ್ಕನ್ನು ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಳೆ ಸುರಿಯದೇ ಇದ್ದಾಗ, ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಅವರು ಮಳೆಗಾಗಿ ತನ್ನ ನಂಬಿಕೆಯಂತೆ ಪ್ರಾರ್ಥಿಸಿದರೆ ಅದನ್ನು ಮೂಢನಂಬಿಕೆಯೆಂದು ತುಚ್ಛೀಕರಿಸುವುದೋ, ಟೀಕಿಸುವುದೋ ಸರಿಯಲ್ಲ. ಆದರೆ ಒಂದು ಸರಕಾರದ ಪರವಾಗಿ ಮಳೆಗಾಗಿ ಸಚಿವರೊಬ್ಬರು ಸಾರ್ವಜನಿಕವಾಗಿ ಹೋಮಹವನ ನಡೆಸಿದಾಗ ಮಾತ್ರ ಅದು ಪ್ರಶ್ನಾರ್ಹವಾಗುತ್ತದೆ. ಅದು ಮೂಢನಂಬಿಕೆಯಲ್ಲದೇ ಇರಬಹುದು, ಆದರೆ ಸಚಿವರು ಆ ಮೂಲಕ ತನ್ನ ನಂಬಿಕೆಯನ್ನು ನಾಡಿನ ಮೇಲೆ ಹೇರಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಮಳೆ ಬಾರದೇ ಇದ್ದಾಗ ಒಬ್ಬ ಸಚಿವನ ಕೆಲಸ ಏನು? ಸಚಿವನಾಗಿ ಆತ ತಕ್ಷಣ ರಾಜಧರ್ಮವನ್ನು ಪಾಲಿಸಬೇಕು. ಅಂದರೆ ಜಲಸಂಪನ್ಮೂಲ ಸಚಿವರು, ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳ ಜೊತೆಗೆ ಸಭೆ ನಡೆಸಬೇಕು. ನೀರಾವರಿ ಇಲಾಖೆಗೆ ಚುರುಕು ಮುಟ್ಟಿಸಿ, ಇರುವ ನೀರನ್ನು ಹೇಗೆ ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸಬೇಕು ಎನ್ನುವ ಕುರಿತು ಕಾರ್ಯಯೋಜನೆಗಳನ್ನು ರೂಪಿಸಬೇಕು. ಹಳ್ಳಿ ಹಳಿಗಳಿಗೆ ಪ್ರವಾಸ ಮಾಡಿ ರೈತರ ಸುಖಕಷ್ಟಗಳಿಗೆ ಸ್ಪಂದಿಸಬೇಕು. ಅಗತ್ಯ ಬಿದ್ದರೆ ಪರಿಹಾರಗಳನ್ನು ಘೋಷಿಸಬೇಕು ಮತ್ತು ಘೋಷಿಸಿದ ಪರಿಹಾರಗಳು ಎಷ್ಟರಮಟ್ಟಿಗೆ ರೈತರನ್ನು ತಲುಪಿವೆೆ ಎನ್ನುವುದನ್ನು ಪರಿಶೀಲಿಸಬೇಕು.

ಮಳೆ ಬಾರದೇ ಇದ್ದ ಸಂದರ್ಭದಲ್ಲಿ ಓರ್ವ ಸಚಿವ ಮಾಡಬೇಕಾದ ಅತ್ಯಗತ್ಯ ಕೆಲಸಗಳು ಇವು. ಇವೆಲ್ಲವನ್ನೂ ಮಾಡುವುದರ ಜೊತೆಗೆ ಮನೆಯಲ್ಲೋ, ಊರ ದೇವಸ್ಥಾನದಲ್ಲೋ ಮಳೆಗಾಗಿ ಒಂದು ವಿಶೇಷ ಪೂಜೆ ಮಾಡಿಸಿದರೆ ಭಾರತದಂತಹ ದೇಶದಲ್ಲ್ಲಿ ಅದನ್ನು ನಾವು ವೌಢ್ಯವೆಂದು ಕರೆಯಲಾಗುವುದಿಲ್ಲ. ಆದರೆ ಸಾರ್ವಜನಿಕವಾಗಿ ಭಾರೀ ವೆಚ್ಚದಲ್ಲಿ ವಿಶೇಷ ಹೋಮ, ಹವನಗಳನ್ನು ತನ್ನ ಹಣದಿಂದಾಗಲಿ, ಸರಕಾರದ ಹಣದಿಂದಾಗಲಿ ಮಾಡಿದರೆ ಅದರಿಂದ ದೇವರಿಗೆ ಸಂತೃಪ್ತಿಯಾಗುತ್ತದೆ ಎಂದು ಸಚಿವರು ಭಾವಿಸಿದರೆ ಅದು ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೋಮಹವನ ಮಾಡುವುದು ಸಂಕಷ್ಟದಲ್ಲಿ ಕುಳಿತಿರುವ ರೈತರನ್ನು ಅಣಕ ಮಾಡಿದಂತಾಗುತ್ತದೆ. ಸಚಿವರು ತಾನು ಮಾಡಬೇಕಾದ ಕರ್ತವ್ಯಗಳನ್ನು ಮಾಡದೆ, ಹೋಮ ಹವನಗಳ ಮೂಲಕ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ನಾವು ಭಾವಿಸಿಕೊಳ್ಳಬೇಕಾಗುತ್ತದೆ.

ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಿ, ತನ್ನ ಸಚಿವ ಖಾತೆಯನ್ನು ಸಮರ್ಥಿಸಿಕೊಳ್ಳಲು ಅವರು ಹೊರಟಿದ್ದಾರೆ. ಇದು ಅಕ್ಷಮ್ಯ. ಮಳೆ ಬಾರದೇ ಇದ್ದಾಗ ವಿಶೇಷ ಪ್ರಾರ್ಥನೆಗಾಗಿಯೇ ದೇವಸ್ಥಾನ, ಮಸೀದಿ, ಚರ್ಚುಗಳಿಗೆ ವಿಶೇಷ ಹಣ ಬಿಡುಗಡೆ ಮಾಡುವುದು, ಹೋಮಹವನಗಳನ್ನು ಮಾಡುವುದು ಸರಕಾರದ ಕೆಲಸ ಅಲ್ಲವೇ ಅಲ್ಲ. ಸಂವಿಧಾನವೇ ಸರಕಾರದ ಧರ್ಮ. ಮತ್ತು ಆ ಧರ್ಮದ ಹಾದಿಯಲ್ಲೇ ಅದು ಹೆಜ್ಜೆ ಇಡಬೇಕು. ಸರಕಾರದೊಳಗಿರುವವರಿಗೆ ವೈಯಕ್ತಿಕವಾಗಿ ನಂಬಿಕೆಗಳಿದ್ದರೆ ಅದನ್ನು ಖಾಸಗಿಯಾಗಿಯೇ ಆಚರಿಸಬೇಕು. ತಮ್ಮ ವೈಯಕ್ತಿಕ ನಂಬಿಕೆಯನ್ನು ಸರಕಾರದ ಮೇಲೆ ಯಾವ ರೀತಿಯಲ್ಲೂ ಹೇರಬಾರದು. ಇಷ್ಟರಮಟ್ಟಿಗೆ ವಿವೇಕವನ್ನು ಆಳುವವರು ಹೊಂದಿರಬೇಕಾಗುತ್ತದೆ.

ಇದೇ ಸಂದರ್ಭದಲ್ಲಿ ಸಚಿವ ಎಂ. ಬಿ. ಪಾಟೀಲ್ ಹೋಮಹವನ ಮಾಡಿದರೆಂದು ಬಿಜೆಪಿಯ ನಾಯಕರು ರಾದ್ಧಾಂತ ಎಬ್ಬಿಸುತ್ತಿರುವುದು ಇನ್ನೊಂದು ತಮಾಷೆಯಾಗಿದೆ. ತಮ್ಮ ಆಳ್ವಿಕೆಯ ಕಾಲದಲ್ಲಿ ದೇವಸ್ಥಾನಗಳಿಗೆ ವಿಶೇಷ ಪೂಜೆಗಾಗಿಯೇ ಹಣ ಬಿಡುಗಡೆ ಮಾಡಿರುವುದು, ಗಂಗಾಜಲವನ್ನು ಟ್ಯಾಂಕರ್‌ಗಳಲ್ಲಿ ವಿತರಿಸಲು ಹೊರಟಿದ್ದು, ವಿಧಾನಸೌಧವನ್ನು ಮಾಟಮಂತ್ರಗಳಿಗೆ ಮೀಸಲಿಟ್ಟಿದ್ದು, ವಿಧಾನಸೌಧದಲ್ಲೇ ಹೋಮಹವನಗಳನ್ನು ಮಾಡಿರುವುದನ್ನು ಜನರು ಮರೆತಿಲ್ಲ. ಕನಿಷ್ಠ ಎಂ. ಬಿ. ಪಾಟೀಲ್ ತಾನು ಮಾಡಿರುವ ಹೋಮಹವನಕ್ಕೆ ಸರಕಾರದ ಹಣ ಬಳಸಿಲ್ಲ ಎಂದಾದರೂ ಹೇಳಿಕೆ ನೀಡಿದ್ದಾರೆ. ಆದರೆ ತನ್ನ ಆಳ್ವಿಕೆಯಲ್ಲಿ ಸರಕಾರದ ಕೋಟಿ ಗಟ್ಟಲೆ ಹಣವನ್ನು ಮಠಗಳಿಗೆ, ಸ್ವಾಮೀಜಿಗಳಿಗೆ ಅನುದಾನವಾಗಿ ಕೊಟ್ಟಿರುವುದನ್ನು ಬಿಜೆಪಿ ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ?

ಸಾರ್ವಜನಿಕವಾಗಿ ಪೂಜೆ ಹವನ ಮಾಡುವುದು, ಸಾರ್ವಜನಿಕ ಇಫ್ತಾರ್ ಕೂಟ ಹಮ್ಮಿಕೊಳ್ಳುವುದು, ಬಕ್ರೀದ್ ಹಬ್ಬದ ದಿನ ಟೋಪಿ ಧರಿಸಿ ಮಸೀದಿಯಲ್ಲಿ ಕಾಣಿಸಿಕೊಳ್ಳುವುದು ಇಂಥವುಗಳಿಂದ ಸಮುದಾಯವನ್ನು ಭಾವನಾತ್ಮಕವಾಗಿ ವಂಚಿಸಬಹುದು. ಆದರೆ ಇದರಿಂದ ಸಮುದಾಯದ ನಿಜವಾದ ಸಮಸ್ಯೆಗಳನ್ನು ಪರಿಹರಿಸಿದಂತಾಗುವುದಿಲ್ಲ. ಭಾವನಾತ್ಮಕವಾಗಿ ಜನರನ್ನು ಹೀಗೆ ಮರುಳು ಮಾಡುವ ಬದಲು, ವಿವಿಧ ಸಮುದಾಯದ ನಿಜವಾದ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವುದು ಸರಕಾರದ ಕರ್ತವ್ಯವಾಗಿದೆ. ಮುಸ್ಲಿಮರ ಜೊತೆಗೆ ಮುಖ್ಯಮಂತ್ರಿಗಳು ಸಾರ್ವಜನಿಕ ಇಫ್ತಾರ್‌ನಲ್ಲಿ ಪಾಲ್ಗೊಳ್ಳದೇ ಇದ್ದರೂ ಚಿಂತೆಯಿಲ್ಲ, ಅಮಾಯಕ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಲಿ. ಮಳೆಗಾಗಿ ಹೋಮಹವನ ಮಾಡುವ ಬದಲು, ರೈತರ ಸಮಸ್ಯೆಗಳಿಗೆ ಸ್ಪಂದಿಸಲಿ.

ಇದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಾದುದಲ್ಲ. ವಿಧಾನಸೌಧದೊಳಗಿರುವ ಎಲ್ಲ ಸರಕಾರಿ ಕಚೇರಿಗಳನ್ನೊಮ್ಮೆ ಗಮನಿಸುತ್ತಾ ಹೋಗಿ. ಅವುಗಳು ವಿವಿಧ ದೇವರುಗಳ ಚಿತ್ರಗಳಿಂದ ಸರ್ವಾಲಂಕೃತಗೊಂಡಿವೆ. ಕಚೇರಿ ಆರಂಭಕ್ಕೆ ಮೊದಲು ಅರ್ಧಗಂಟೆಗಳ ಕಾಲ ಅಲ್ಲಿ ಪೂಜೆ, ಗಂಟೆಗಳ ಸದ್ದು ಮೊಳಗುತ್ತವೆ. ದೇವರ ನಂಬಿಕೆ ವೈಯಕ್ತಿಕವಾದುದು. ಅದನ್ನು ಕಚೇರಿಗೆ ಹೊತ್ತುಕೊಂಡು ಬರುವುದು, ಕಚೇರಿಯ ಸಮಯದಲ್ಲಿ ಪೂಜೆ, ಹವನ ನಡೆಸುವುದು ಅಪರಾಧವೆಂದು ಇವರಿಗೆ ಸರಕಾರ ಕಠಿಣ ಭಾಷೆಯಲ್ಲಿ ತಿಳಿಸಬೇಕು. ಎಲ್ಲ ಸರಕಾರಿ ಕಚೇರಿಗಳಲ್ಲಿರುವ ದೇವರ ಫೋಟೋಗಳನ್ನು ಕಿತ್ತು ಹಾಕಿ ಅಲ್ಲಿ ಗಾಂಧಿ, ಅಂಬೇಡ್ಕರ್, ನೆಹರೂ ಫೋಟೋಗಳನ್ನು ಇಡಲು ಆದೇಶಿಸಬೇಕು.

ಲಂಚ ತೆಗೆದುಕೊಳ್ಳದೆ ಜನಸಾಮಾನ್ಯರ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ದೇವರಿಗೆ ನಾವು ಮಾಡುವ ಅತೀ ದೊಡ್ಡ ಪೂಜೆ. ಈ ನಿಟ್ಟಿನಲ್ಲಿ ಸರಕಾರ ತಕ್ಷಣ ಎಲ್ಲ ಸರಕಾರಿ ಕಚೇರಿಗಳಿಗೆ, ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಠಿಣ ಸೂಚನೆ ನೀಡುವುದು ಅತ್ಯಗತ್ಯವಾಗಿದೆ. ಈ ಮೂಲಕ ಸರಕಾರದ ದೇವರ ಕೆಲಸ ಎಂಬ ಘೋಷಣೆಯನ್ನು ಅರ್ಥಪೂರ್ಣಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News