×
Ad

ಶಿಥಿಲಗೊಂಡ ಶಾಲೆ : ಅಧಿಕಾರಿಗಳ ನಿರ್ಲಕ್ಷ್ಯ

Update: 2017-06-09 17:16 IST

ಸಾಗರ, ಜೂ.9 : ಶಾಲೆಯ ಮೇಲ್ಚಾವಣಿ ಶಿಥಿಲಗೊಂಡು, ಪಕ್ಕಾಸ್ ಕುಸಿದು ಬೀಳುತ್ತಿದ್ದರೂ ಅಧಿಕಾರಿಗಳು ಸೂಕ್ತ ನಿಗಾವಹಿಸದೆ ಇರುವ ಕ್ರಮವನ್ನು ಮಂಜಿನಕಾನು ಗ್ರಾಮಸ್ಥರು ಖಂಡಿಸಿದ್ದಾರೆ.

ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಹಿರೇಮನೆ ಸಮೀಪದ ಮಂಜಿನಕಾನು ಕುಗ್ರಾಮವಾಗಿದೆ. ಮಂಜಿನಕಾನು ಗ್ರಾಮದಲ್ಲಿ ಅನೇಕ ವರ್ಷಗಳಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಳೇಯ ಶಾಲೆಯಾಗಿರುವುದರಿಂದ ಕೊಠಡಿ ಪೂರ್ಣ ಶಿಥಿಲಗೊಂಡಿದ್ದು, ಮೇಲ್ಚಾವಣಿಗೆ ಹಾಕಿರುವ ಪಕ್ಕಾಸ್ ಹಾಗೂ ರಿಪೀಸ್‌ಗಳಿಗೆ ವರಲೆ ಹಿಡಿದು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ.

2014ರಿಂದಲೂ ಶಾಲೆ ಇದೇ ಅವಸ್ಥೆಯಲ್ಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುವ ಸ್ಥಿತಿ ಇದೆ. ಶಾಲಾ ಕೊಠಡಿ ರಿಪೇರಿ ಮಾಡಿಕೊಡುವಂತೆ ಸಾಕಷ್ಟು ಭಾರಿ ಕ್ಷೇತ್ರ ಶಾಸಕರಿಗೆ, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆಗೆ ಸಹ ಈ ಬಗ್ಗೆ ಹತ್ತಾರು ಮನವಿಯನ್ನು ಕೊಡಲಾಗಿದೆ. ಮನವಿ ಪಡೆದವರೆಲ್ಲ ಭರವಸೆ ನೀಡುತ್ತಿದ್ದಾರೆಯೆ ವಿನಃ ಶಾಲೆ ಮೇಲ್ಚಾವಣಿ ದುರಸ್ತಿಗೆ ಮುಂದಾಗುತ್ತಿಲ್ಲ. ಶಾಲೆಯ ದುರಾವಸ್ಥೆ ಕಂಡು ಪೋಷಕರು ಮಕ್ಕಳನ್ನು ಕಳಿಸಲು ಹಿಂದೆಮುಂದೆ ನೋಡುತ್ತಿದ್ದಾರೆ. ಶಾಲಾಭಿವೃದ್ದಿ ಸಮಿತಿ ಪ್ರತಿವರ್ಷ ಪೋಷಕರ ಮನೆಗೆ ಹೋಗಿ, ಮಕ್ಕಳನ್ನು ಕಳಿಸುವಂತೆ ಮನವೊಲಿಸುವ ಕೆಲಸವನ್ನು ಮಾಡುತ್ತಿದೆ.

ಈ ಬಾರಿ ಮಳೆಗಾಲದಲ್ಲಿ ಪೂರ್ಣ ಕೊಠಡಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಮಕ್ಕಳು ಹಾಗೂ ಶಿಕ್ಷಕರು ಕೊಠಡಿಯೊಳಗೆ ಹೋಗಲು ಹೆದರುವ ಸ್ಥಿತಿ ಇದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಕೊಠಡಿ ರಿಪೇರಿಗೆ ಮುಂದಾಗದೆ ಇದ್ದಲ್ಲಿ ಶಾಲಾಭಿವೃದ್ದಿ ಸಮಿತಿ ವತಿಯಿಂದ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಸಂತ, ನಿರ್ದೇಶಕರಾದ ಶಾಂತಾ, ಗಣಪತಿ, ಗ್ರಾಮದ ಹಿರಿಯರಾದ ಎಂ.ನಾರಾಯಣಪ್ಪ ಮಂಜಿನಕಾನು ಇನ್ನಿತರರು ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News