ಮೆಗ್ಗಾನ್ ಆಸ್ಪತ್ರೆ ಪ್ರಕರಣ : ಆರೋಗ್ಯ ಸಚಿವರಿಗೆ ಮನವಿ
ಸಾಗರ,ಜೂ.9 : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಈಚೆಗೆ ನಡೆದ ರೋಗಿಯೊಬ್ಬರ ಶೋಷಣೆಗೆ ಸಂಬಂಧಪಟ್ಟಂತೆ ಉನ್ನತ
ಮಟ್ಟದ ತನಿಖೆ ನಡೆಸಬೇಕು ಮತ್ತು ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಪ್ರಜಾ ವಿಮೋಚನಾ ಸೇನೆ ಮಾನವತವಾದ ಸಂಸ್ಥೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಸ್ವಾಮಿ, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಬದುಕು ತುಂಬಾ ದುಸ್ತರವಾಗುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಬದ್ಧವಾಗಿ ನಿರ್ಗತಿಕರಿಗೆ, ಬಡವರಿಗೆ ಸಿಗಬೇಕಾದ ಸೌಲಭ್ಯ ತಲುಪಿಸುವಲ್ಲಿ ಅಧಿಕಾರಿ ಹಂತದಲ್ಲಿ ಕೆಲಸ ಮಾಡುತ್ತಿರುವವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡ ರೋಗಿಯೊಬ್ಬರು ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ರೋಗಿಗೆ ವ್ಹೀಲ್‌ಚೇರ್ ಕೊಡದೆ ಅಮಾನವೀಯತೆ ಮೆರೆಯಲಾಗಿದೆ. ರೋಗಿಯ ಪತ್ನಿ ಬೇರೆ ದಾರಿ ಇಲ್ಲದೆ ನೆಲದ ಮೇಲೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ನಿಜಕ್ಕೂ ಕರುಳು ಕಿತ್ತು ಬರುವಂತಹದ್ದಾಗಿದೆ ಎಂದು ತಿಳಿಸಿದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೆ ಆಸ್ಪತ್ರೆಯ ಡಿ ದರ್ಜೆ ನೌಕರರನ್ನು ಅಮಾನತ್ತು ಮಾಡಿ, ಸರಕಾರ ಕೈತೊಳೆದುಕೊಳ್ಳುವ ಕೆಲಸ ಮಾಡಿದೆ. ಆಸ್ಪತ್ರೆಯನ್ನು ಸರಿಯಾಗಿ ನಿರ್ವಹಿಸದ ಹಿರಿಯ ಅಧಿಕಾರಿಗಳು ಬಚಾವಾಗುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ಘಟನೆಯ ನೈತಿಕ ಹೊಣೆಯನ್ನು ಅಧಿಕಾರಿಗಳು ಹೊತ್ತುಕೊಳ್ಳಬೇಕು. ಕೂಡಲೆ ಆರೋಗ್ಯ ಸಚಿವರು ಆಸ್ಪತ್ರೆಯ ಹಿರಿಯ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಇಲ್ಲವಾದಲ್ಲಿ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಗುಡ್ಡೆಕೌತಿ, ಈರೇಶಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಎಲ್.ಜಿ., ಖಜಾಂಚಿ ಶೇಟು, ವೀರೇಂದ್ರ ಮಡಸೂರು, ತಾಲ್ಲೂಕು ಅಧ್ಯಕ್ಷ ಬಂಗಾರಪ್ಪ ಬೆಳಲಮಕ್ಕಿ, ಗೌರವಾಧ್ಯಕ್ಷ ಆನಂದ ಮೇಸ್ತ್ರಿ, ದೇವರಾಜ ಚಿಕ್ಕನೆಲ್ಲೂರು, ನಿಂಗಪ್ಪ ಕಂಬಳಿಕೊಪ್ಪ, ಜಯರಾಮ ಶೆಟ್ಟಿ ಕೋಳೂರು, ರಮೇಶ್ ದಿಗಟೆಕೊಪ್ಪ, ಪ್ರಕಾಶ್ ಮಾಲ್ವೆ, ಉಮೇಶ್ ಮೊಗವೀರ, ನಾಗರಾಜ, ಮಧುಕರ ಎಂ.ಎಸ್., ಅಶೋಕ್ ಬಿ. ಇನ್ನಿತರರು ಹಾಜರಿದ್ದರು.