ಕಡೂರು ಕ್ಷೇತ್ರವು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶ: ಎಚ್.ಡಿ.ದೇವೇಗೌಡ
ಕಡೂರು, ಜೂ. 9: ಕಳೆದ 9 ವರ್ಷಗಳಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಗಳು ನಡೆದಿವೆ. ಕಡೂರು ಕ್ಷೇತ್ರವು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಹೇಳಿದರು.
ಅವರು ಪಟ್ಟಣದ ಪಿಯು ಕಾಲೇಜಿನಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ಸ್ಮ್ಟಾರ್ಟ್ ಕ್ಲಾಸ್ 3 ಕೊಠಡಿಗಳು, ರೂ. 80 ಲಕ್ಷ ವೆಚ್ಚದಲ್ಲಿ 6 ಹೆಚ್ಚುವರಿ ಕೊಠಡಿಗಳು ರೂ. 7 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ಹಾಗೂ ಪ್ರೌಢಶಾಲಾ ವಿಭಾಗದ ಆರ್.ಎಂ.ಎಸ್.ಎ ಯೋಜನೆಯಡಿ ರೂ. 80 ಲಕ್ಷ ವೆಚ್ಚದ 10 ಕೊಠಡಿಗಳು ರೂ. 10 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಾಲಯವನ್ನು ಉಧ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಅಭಿವೃದ್ಧಿ ಕುಡಿಯುವ ನೀರಿನ ಯೋಜನೆ, ಕೃಷಿ ಯೋಜನೆಗಾಗಿ ಕಾರ್ಯಕ್ರಮಗಳು ನಡೆದಿದ್ದು,ಶಾಶ್ವತ ನೀರಾವರಿಗಾಗಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
2017-18ನೇ ಸಾಲಿನ ಸಂಸದರ ಅನುದಾನದಲ್ಲಿ ಕಡೂರು ಕ್ಷೇತ್ರಕ್ಕೆ 1 ಕೋ.ರೂ. ಅನುದಾನ ನೀಡಲಾಗುವುದು. ಶಾಸಕರ ಸಂಸದರ ಅನುದಾನ ನೀಡುವುದರ ಮೂಲಕ ಈ ಕಾಲೇಜಿನ ಕೊರತೆಯನ್ನು ನಿಗೀಸಲು ಪ್ರಯತ್ನ ಮಾಡಲಾಗುವುದು. ಸುಮಾರು 3 ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿನ ಕೆಲಸಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಸುಮಾರು 200 ಗ್ರಾಮಗಳಿಂದ ಈ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿದ್ದು, ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಜಿಲ್ಲೆಯಲ್ಲಿ ಪ್ರತಿಷ್ಟಿತ ಕಾಲೇಜು ಆಗಿದ್ದರು, ಈ ಸಾಲಿನಲ್ಲಿ ಉತ್ತಮ ಫಲಿತಾಂಶ ಬಂದಿರುವುದಿಲ್ಲ. ಭವಿಷ್ಯದಲ್ಲಿ ಸರಿ ಪಡಿಸಲಾಗುವುದು. ಇರುವ ಹಲವಾರು ಸಮಸ್ಯೆಗಳಿಗೆ ಆ.15ರ ಒಳಗೆ ನಿವಾರಣೆ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಪಿಯು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗರಾಜಪ್ಪ, ತರೀಕೆರೆ ಉಪವಿಭಾಗಾಧಿಕಾರಿ ಬಿ.ಬಿ. ಸರೋಜ, ಪುರಸಭಾ ಅಧ್ಯಕ್ಷ ಎಂ. ಮಾದಪ್ಪ, ಸದಸ್ಯರಾದ ಪುಷ್ಪಲತಾಸೋಮೇಶ್, ಜಿ. ಸೋಮಯ್ಯ, ಎಪಿಎಂಸಿ ನಿರ್ದೇಶಕ ಕೆ.ಹೆಚ್. ಲಕ್ಕಣ್ಣ, ಪ್ರಾಂಶುಪಾಲ ಸಿ. ಜಯಪ್ಪ, ಉಪಪ್ರಾಂಶುಪಾಲೆ ಎ.ಎನ್. ಶೀಲಾ, ಪುಟ್ಟಕರಿಯಪ್ಪ, ಜಿ. ಸೋಮಯ್ಯ, ಭಂಡಾರಿಶ್ರೀನಿವಾಸ್, ಕೆ.ಎಂ. ಮಹೇಶ್ವರಪ್ಪ, ಸೀಗೇಹಡ್ಲುಹರೀಶ್ ಉಪಸ್ಥಿತರಿದ್ದರು.