×
Ad

ರೈತರ ಮೇಲೆ ಗೋಲಿಬಾರ್ ಖಂಡಿಸಿ ಪ್ರತಿಭಟಣೆ

Update: 2017-06-09 18:12 IST

ದಾವಣಗೆರೆ,ಜೂ.9:ಮಧ್ಯ ಪ್ರದೇಶದಲ್ಲಿನ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ ನಗರದಲ್ಲಿ ಶುಕ್ರವಾರ ಸೋಷಿಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್‌ನಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ರೈತರು ಬೆಂಬಲ ಬೆಲೆ ಹಾಗೂ ಸಾಲಮನ್ನಾಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಚಳುವಳಿಯ ಮೇಲೆ ಮಧ್ಯ ಪ್ರದೇಶದ ಬಿಜೆಪಿ ರಾಜ್ಯ ಸರಕಾರ ಪೊಲೀಸರ ಮೂಲಕ ಗೋಲಿಬಾರ್ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಎಸ್‌ಯುಸಿಐಸಿ ಪಕ್ಷದ ಜಿಲ್ಲಾ ಸಂಚಾಲಕ ಮಂಜುನಾಥ್ ಕೈದಾಳೆ ಮಾತನಾಡಿ, ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರಕಾರ ಸಂಪೂರ್ಣ ಬಂಡವಾಳ ಶಾಹಿಗಳ ಪರ ಹಾಗೂ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಪ್ರತಿ ಚುನಾವಣೆಯಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರ ಕಾಳಜಿಯ ಬಗ್ಗೆ ಮಾತನಾಡಿ ಚುನಾವಣೆ ಗೆದ್ದ ನಂತರದಲ್ಲಿ ಟಾಟಾ, ಬಿರ್ಲಾ, ಅದಾನಿ ಇನ್ನಿತರೆ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿ ನೀರು, ವಿದ್ಯುತ್, ಭೂಮಿ ತೆರಿಗೆಯಲ್ಲಿ ರಿಯಾಯಿತಿ ರೂಪದಲ್ಲಿ ಲಕ್ಷಾಂತರ ಕೋಟಿ ನೀಡಲಾಗುತ್ತಿದೆ ಎಂದು ಸರಕಾರದ ವಿರುದ್ಧ ದೂರಿದರು.

ಈಗಾಗಲೇ ಮಧ್ಯಪ್ರದೇಶದಲ್ಲಿ ಗೋಲಿಬಾರ್‌ನಿಂದ ಆರು ರೈತರು ಹತ್ಯೆ ಮಾಡಲಾಗಿದ್ದು, ಸರಕಾರದಿಂದ ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಅಲ್ಲದೇ ಗೋಲಿಬಾರ್‌ನಲ್ಲಿ ಗಾಯಗೊಂಡ ರೈತರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು ಹಾಗೂ ರೈತರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News