ಸಕಲೇಶಪುರದಲ್ಲಿ ರಾಷ್ಟ್ರಿಯ ಮಟ್ಟದ ಕಾಫಿ ಕರಷಿ ಮೇಳ
ಸಕಲೇಶಪುರ, ಜೂ.9: ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಜೂ.14 ಮತ್ತು 15 ರಂದು ರಾಷ್ಟ್ರೀಯ ಕೃಷಿ ಮೇಳ, ಕೃಷಿಕ ಪತ್ರಿಕೆ ವರ್ಷಾಚರಣೆ ಹಾಗೂ ವಾರ್ಷಿಕ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ(ಎಚ್‌ಡಿಪಿಎ)ಅಧ್ಯಕ್ಷ ಕೆ.ಬಿ.ಕೃಷ್ಣಪ್ಪ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಮಲೆನಾಡು ಭಾಗದ ಕಾಫಿ ಬೆಳೆಗಾರರು ತಂತ್ರಜ್ಞಾನದ ಸಮಗ್ರ ಮಾಹಿತಿ ಪಡೆದು ಏಳಿಗೆಯತ್ತ ಹೆಜ್ಜೆ ಹಾಕಬೇಕು ಎಂಬ ಉದ್ದೇಶದಿಂದ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ ಬರುವ ಪ್ರಸಿದ್ದ ಕಂಪೆನಿಗಳ ಕಾಫಿ ಕೃಷಿ ಮೇಳ ಎರಡು ದಿನಗಳ ಕಾಲ ನಡೆಯಲಿರುವುದು ವಿಶೇಷವಾಗಿದೆ ಎಂದರು.
ಸಮಾರಂಭದ ಮೊದಲ ದಿನ ಬೆಳಗ್ಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಜಯರಾಂ ಕಾಫಿ ಕರಷಿ ಮೇಳ ಉದ್ಘಾಟಿಸುವರು. ಮಲೆನಾಡು ಭಾಗದ ಬೆಳೆಗಾರರ ಆಗು ಹೋಗುಗಳ ಬಗ್ಗೆ ಆಯೋಜಿಸಿರುವ ಪರಿಸರ ವೇದಿಕೆ ಕಾರ್ಯಕ್ರಮವನ್ನು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಪಿ.ಮೋಹನ್ ಉದ್ಘಾಟಿಸಲಿದ್ದಾರೆ.
ನಂತರ ಬೆಳೆಗಾರ ಪತ್ರಿಕೆ ವರ್ಷಾಚರಣೆ ನಡೆಯಲಿದ್ದು ಈ ವರೆಗೆ ಪ್ರಕಟವಾದ ಲೇಖನಗಳ ಬಗ್ಗೆ ಚರ್ಚೆ, ಪತ್ರಿಕೆಯ ಮುಂದಿನ ನಡೆ ಕುರಿತು ಸಮಾಲೋಚನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಚ್‌ಡಿಪಿಎ ಟ್ರಷ್ಟ್ ಅಧ್ಯಕ್ಷ ಹಾಗೂ ಕೃಷಿಕ ಸಂಪಾದಕ ಎನ್.ಬಿ.ಉದಯ್ ಕುಮಾರ್ ಉಪಸ್ಥಿತರಿರುತ್ತಾರೆ ಎಂದರು.
ಗುರುವಾರ ಬೆಳಗ್ಗೆ 10.30ಕ್ಕೆ ಎಚ್‌ಡಿಪಿಎ 3ನೆ ವರ್ಷದ ವಾರ್ಷಿಕ ಮಹಾ ಸಮ್ಮೇಳನ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ನೀರಾವರಿ ಸಚಿವ ಎಂ.ಬಿ.ಪಾಟೀಲ್, ಅರಣ್ಯ ಸಚಿವ ರಮಾನಾಥರೈ, ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಕರ್ನಾಟಕ ಬೆಳೆಗಾರರ ಒಕ್ಕೂಟದ ಜೈರಾಂ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಶಾಸಕ ರುದ್ರೇಶಗೌಡ, ಭಾರತಿಯ ಕಾಫಿ ಮಂಡಳಿ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಲೆನಾಡು ಭಾಗದಲ್ಲಿ ರೈತರು ಅನುಭವಿಸುತ್ತಿರುವ ಎಲ್ಲಾ ವಿಧವಾದ ಸಮಸ್ಯೆಗಳು, ಹೊಸ ತಂತ್ರಜ್ಞಾನದ ಅರಿವು, ಮಾಹಿತಿಗಳಿಗೆ ಈ ಬಾರಿಯ ಕೃಷಿ ಮೇಳ ವೇದಿಕೆಯಾಗಲಿದ್ದು, ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೊಷ್ಟಿಯಲ್ಲಿ ಎಚ್ ಡಿಪಿಎ ಗೌರವ ಕಾರ್ಯದರ್ಶಿ ಎಂ.ಎಚ್.ಪ್ರಕಾಶ್, ಕಾರ್ಯಕ್ರಮ ಸಂಯೋಜಕ ಮುಜಾಹಿದ್ ಆಲಂ, ಎಚ್.ಎಚ್.ಉದಯ್, ಉಪಾಧ್ಯಕ್ಷ ಮಹೇಶ್, ಖಜಾಂಚಿ ವಿಶ್ವನಾಥ ನಾಯಕ್, ಜಂಟಿ ಕಾರ್ಯದರ್ಶಿ ಎಸ್.ಕೆ.ಸೂರ್ಯ, ಸದಸ್ಯ ಬಿ.ಎಂ.ನಾಗರಾಜ್ ಇದ್ದರು.