ಕೇಂದ್ರ ಸರಕಾರದ ಮೋದಿ ಫೆಸ್ಟ್‌ಗೆ ಚಾಲನೆ
ತುಮಕೂರು.ಜೂ.9:ನಗರದ ಸರಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ ಕೇಂದ್ರ ಸರಕಾರದ ಮೂರು ವರ್ಷದ ಸಾಧನೆಯನ್ನು ವಿವರಿಸುವ ಮೋದಿ ಫೆಸ್ಟ್ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಬಿಜೆಪಿ ಮುಖಂಡರ ಜೊತೆ, ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಚಾಲನೆ ನೀಡಿದರು.
ಪ್ರಧಾನ ಮಂತ್ರಿಗಳ ಉದ್ದಿಮೆಶೀಲತಾ ಯೋಜನೆಯ ಫಲಾನುಭವಿ ಅರ್ಜುನ ಮಾತನಾಡಿ,ಎಂಬಿಎ ಪದವಿಧರನಾಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನನಗೆ 2015ರಲ್ಲಿ ನನ್ನ ಮೊಬೈಲ್‌ಗೆ ಪಿಎಂಇಜಿಎಸ್‌ವೈ ಯೋಜನೆಯ ಬಗ್ಗೆ ಎಸ್.ಎಮ್.ಎಸ್.ಬಂದಿತ್ತು.ಇದರ ಅನ್ವಯ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಹೋಗಿ ವಿಚಾರ ಮಾಡಿದಾಗ, ಹೊಸ ಅವಿಷ್ಕಾರದ ವಸ್ತುಗಳ ಉತ್ಪಾಧನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.ಈ ಹಿನ್ನೆಲೆಯಲ್ಲಿ ಮಧುಮೇಹ ರೋಗಿಗಳಿಗೆ ಕಾರ್ಬೋಹೈಡ್ರೆಡ್ ರಹಿತ ಮೊಳಕೆ ಭರಿತ ಗೋಧಿ ಹಿಟ್ಟನ್ನು ಸಂಸ್ಕರಿಸಿ ನೀಡುವ ಕೆಲಸ ಆರಂಭಿಸಿದ್ದು, 10 ಲಕ್ಷ ರೂ ಬ್ಯಾಂಕ್ ಸಾಲವನ್ನು ಯಾವುದೇ ಆಧಾರ ನೀಡದೆ ಪಡೆದಿರುವುದಾಗಿ ತಿಳಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ ಶಿವಪ್ರಸಾದ್ ಅವರು, ಕಳೆದ ಮೂರು ವರ್ಷಗಳಲ್ಲಿ ಮೋದಿ ಸರಕಾರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿದ್ದು,ಪ್ರಧಾನ ಮಂತ್ರಿಗಳ ಕೃಷಿ ಸಂಚಯಿ,ಪ್ರಧಾನ ಮಂತ್ರಿಗಳ ಫಸಲು ಭೀಮಾ ಯೋಜನೆ, ಅಟಲ್ ಪಿಂಚಿಣಿ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ವಿಮಾ ಯೋಜನೆ,ಮುದ್ರಾ ಯೋಜನೆ,ಸ್ವಚ್ಚ ಭಾರತ ಯೋಜನೆಯಿಂದ ಲಕ್ಷಾಂತರ ಜನ ಲಾಭ ಪಡೆದುಕೊಂಡಿದ್ದಾರೆ ಎಂದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದ ರಾಜ್ಯಕ್ಕೆ 104 ಕೋ. ರೂ. ಪರಿಹಾರ ಬಂದಿದ್ದು,ತುಮಕೂರು ಜಿಲ್ಲೆಯ 28 ಸಾವಿರ ರೈತರು 21 ಕೋಟಿ ರೂ ಲಾಭ ಪಡೆದಿದ್ದಾರೆ.ಅಲ್ಲದೆ, ಮುದ್ರಾ ಯೋಜನೆಯಿಂದ ರಾಜ್ಯದ 19.58 ಲಕ್ಷ ಜನರು 11,655 ಕೋ. ಸಾಲ ಸೌಲಭ್ಯ ಪಡೆದಿದ್ದಾರೆ.ತುಮಕೂರು ಜಿಲ್ಲೆಯ 17857 ಜನರು 163.5 ಕೋ. ರೂ ಸಾಲ ಪಡೆದಿದ್ದಾರೆ. ರೈತರು, ಬಡವರು, ಮಹಿಳೆಯರ ಅಭಿವೃದ್ದಿ ನಿಗಧಿತ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರೈಸಿ ಹೆಚ್ಚಿನ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಶಿವಪ್ರಸಾದ್ ತಿಳಿಸಿದರು.