ಬೆಳೆ ನಷ್ಟಕ್ಕೆ 1 ರೂ. ಪರಿಹಾರ!

Update: 2017-06-09 17:01 GMT

ತುಮಕೂರು, ಜೂ.9: ಸತತ ಬರದಿಂದ ತತ್ತರಿಸಿರುವ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ನಿಯಮಗಳ ಅಡಿಯಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರದ ಮೂಲಕ ಇನ್‌ಪುಟ್ ಸಬ್ಸಿಡಿ ನೀಡುತ್ತಾ ಬಂದಿದೆ. ಆದರೆ, ಜೂನ್ 6ರಂದು ಜಿಲ್ಲೆಯ ರೈತರೊಬ್ಬರಿಗೆ ಕೇವಲ 1 ರೂ. ಪರಿಹಾರ ಧನ ಆರ್‌ಟಿಜಿಎಸ್ ಮೂಲಕ ರೈತನ ಖಾತೆಗೆ ಜಮಾ ಮಾಡಿರುವುದು ಆಶ್ಚರ್ಯ ಮೂಡಿಸಿದೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಸಿರಿವರ ಗ್ರಾಮದ ಶಿವರಾಮಯ್ಯ ಎಂಬ ನಿವೃತ್ತ ಸರಕಾರಿ ನೌಕರರಿಗೆ 1.30 ಗುಂಟೆ ಜಮೀನು, ಸಿರಿವರ ಸರ್ವೆ ನಂ 111/3 ಎ ನಲ್ಲಿ 22 ಗುಂಟೆ, 111/4 ರಲ್ಲಿ 31 ಗುಂಟೆ ಹಾಗೂ 138/1ಎ1 6 ಗುಂಟೆ ಭೂಮಿ ಇದ್ದು, ಇಷ್ಟು ಭೂಮಿಗೆ ರಾಗಿಯನ್ನು ಬಿತ್ತನೆ ಮಾಡಿದ್ದು, ಮಳೆಯಿಲ್ಲದ ಕಾರಣ ಸಂಪೂರ್ಣ ಬೆಳೆ ಹಾಳಾಗಿತ್ತು. ಬೆಳೆ ನಷ್ಟ ಅಂದಾಜಿಗೆ ಬಂದ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ನಷ್ಟ ನಮೂದಿಸಿ ಸರಕಾರಕ್ಕೆ ಕಳುಹಿಸಿದ್ದರು.

ಕೇಂದ್ರ ಸರಕಾರ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಒಂದು ಎಕರೆಗೆ ತಲಾ 6,000 ರೂ. ಪರಿಹಾರ ನೀಡಬೇಕು. ಆದರೆ, ಒಂದು ಎಕರೆ 30 ಗುಂಟೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ಸಂಪೂರ್ಣ ಒಣಗಿದ್ದರೂ ಸದರಿ ರೈತರ ಖಾತೆಗೆ ಕಂದಾಯ ಇಲಾಖೆಯಿಂದ ಬಂದಿರುವುದು ಕೇವಲ 1 ರೂ . ಮಾತ್ರ. ಜೂನ್ 6ರಂದು ಶಿವರಾಮಯ್ಯ ಅವರ ಇಂಡಿಯನ್ ಬ್ಯಾಂಕ್ ಖಾತೆ ನಂ. 916122044ಗೆ ಸರಕಾರದ ಕಂದಾಯ ಇಲಾಖೆಯ 96102011640 ನಂಬರ್‌ನಿಂದ ಆರ್‌ಟಿಜಿಎಸ್ ಮೂಲಕ ಹಣ ಸಂದಾಯವಾಗಿದೆ.

 ಈ ಬಗ್ಗೆ ಸಂಬಂಧಪಟ್ಟ ಸಿರಿವರ ವೃತ್ತದ ಗ್ರಾಮಲೆಕ್ಕಿಗರನ್ನು ವಿಚಾರಿಸಿದರೆ, ತಾಂತ್ರಿಕ ಕಾರಣಗಳಿಂದ ಈಗಾಗಿದೆ. ಸಮಸ್ಯೆಯನ್ನು ಸರಿಪಡಿಸಿ ಸರಿಯಾದ ಪರಿಹಾರವನ್ನು ಕಳುಹಿಸುತ್ತಾರೆಂದು ಹೇಳುತ್ತಿದ್ದಾರೆ. ಕಂದಾಯ ಇಲಾಖೆಯಿಂದ ಒಂದು ರೂ. ಪರಿಹಾರ ಬಂದಿರುವುದು ಶಿವರಾಮಯ್ಯ ಅವರಿಗೆ ಮಾತ್ರವಲ್ಲ. ಇದೇ ವೃತ್ತದ ಹಲವರಿಗೆ ಒಂದು ರೂ. ಎರಡು ರೂ. ಎಂಟು ರೂ. ಹೀಗೆ ತರಾವರಿ ಪರಿಹಾರದ ಹಣ ಬಂದಿದೆ.

ಈ ಹಿಂದಿನ ವರ್ಷ ಇನ್‌ಪುಟ್ ಸಬ್ಸಿಡಿಯನ್ನು ಜಿಲ್ಲಾ ಮಟ್ಟದಲ್ಲಿ ರೈತರ ಖಾತೆಗೆ ಆರ್‌ಟಿಜಿಎಸ್‌ಮೂಲಕ ಹಾಕಲಾಗಿತ್ತು. ಆದರೆ, ಈ ಬಾರಿ ಬೆಂಗಳೂರಿನಿಂದ ಹಣ ಸಂದಾಯ ಮಾಡುತ್ತಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ. ಸ್ಥಳೀಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News