×
Ad

ಅನುದಾನ ಒದಗಿಸಲು ಕೇಂದ್ರಕ್ಕೆ ಕಾಫಿ ಪ್ರಸ್ತಾವನೆ: ಎಂ.ಎಸ್.ಭೋಜೇಗೌಡ

Update: 2017-06-10 17:15 IST

ಚಿಕ್ಕಮಗಳೂರು, ಜೂ.10:  ಕಾಫಿ ತೋಟಗಳಲ್ಲಿ ನೀರು ಸಂಗ್ರಹಣಾ ಟ್ಯಾಂಕುಗಳ ನಿರ್ಮಾಣಕ್ಕೆ ಬೆಳೆಗಾರರಿಗೆ ಸಹಾಯ ಧನ ನೀಡಲು ಅನುದಾನ ಒದಗಿಸುವಂತೆ ಕಾಫಿ ಮಂಡಳಿಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಹೇಳಿದರು.

ಅವರು ಶನಿವಾರ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ನಗರದ ಕಾಫಿ ಮಂಡಳಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾಫಿ ತೋಟಗಳಲ್ಲಿ 'ಬೆಳೆ ವೈವಿಧ್ಯತೆ 'ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆಯಿಂದಾಗಿ ಕಾಫಿ ತೋಟಗಳಲ್ಲಿ ನೈಸರ್ಗಿಕ ನೀರಿನ ಮೂಲಗಳು ಬತ್ತಲಾರಂಭಿಸಿವೆ. ಈ ಬಾರಿಯಂತೂ ಬೇಸಿಗೆಯಲ್ಲಿ ತೋಟಗಳಲ್ಲಿ ನೀರಿನ ಮೂಲಗಳು ಸಂಪೂರ್ಣ ಬತ್ತಿ ಹೋಗಿದ್ದರಿಂದಾಗಿ ಬೆಳೆಗಾರರು ಗಿಡಗಳಿಗೆ ನೀರು ಹರಿಸಲು ಪರದಾಡುವಂತಾಯಿತು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹರಿಯುವ ನೀರನ್ನು ಬೇಸಿಗೆವರೆಗೆ ತೋಟಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲು ಟ್ಯಾಂಕ್‌ಗಳನ್ನು ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದರು.

ಇದೇ ವೇಳೆ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಳು ಕಾಫಿ ತೋಟಗಳಲ್ಲಿ ಉಪಬೆಳೆಗಳನ್ನು ಬೆಳೆಯುವ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಿದರು.  ಕಾಫಿ ಮಂಡಳಿ ಸದಸ್ಯರಾದ ಕೆ.ಕೆ.ಮನುಕುಮಾರ್, ಬಿ.ಹೆಚ್.ವಿ.ಪ್ರದೀಪ್ ಪೈ, ಎಂ.ಕಲ್ಲೇಶ್, ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ಕಂಠನ್, ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಜೆ.ಆನಂದ್, ಮಂಡಳಿಯ ಜಂಟಿ ನಿರ್ದೇಶಕ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News