ಪ್ರಕೃತಿಗೆ ಮನುಷ್ಯನ ಆಸೆ ಈಡೇರಿಸುವ ಶಕ್ತಿ ಇದೆಯೇ ಹೊರತು ದುರಾಸೆಯನ್ನಲ್ಲ: ಪ್ರೊ.ಸುಧಾಪ್ರಶಾಂತ್

Update: 2017-06-10 11:50 GMT

ಚಿಕ್ಕಮಗಳೂರು, ಜೂ.10:  ಪ್ರಕೃತಿಗೆ ಮನುಷ್ಯನ ಆಸೆಯನ್ನು ಈಡೇರಿಸುವ ಶಕ್ತಿ ಇದೆಯೆ ಹೊರತು ದುರಾಸೆಯನ್ನಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಐಡಿಎಸ್‌ಜಿ ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರೊ.ಸುಧಾಪ್ರಶಾಂತ್ ನುಡಿದರು.

ಅವರು ಅಕ್ಕಮಹಾದೇವಿ ಮಹಿಳಾಸಂಘ ಜ್ಯೋತಿನಗರದ ಶರಣೆ ಆಯ್ದಕ್ಕಿಲಕ್ಕಮ್ಮ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಕಾರಹುಣ್ಣಿಮೆಯಂದು ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮರಗಿಡಗಳನ್ನು ವ್ಯಾಪಕವಾಗಿ ಬೆಳೆಸಬೇಕು. ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಿ ಭಾರತ ಬಹಳಷ್ಟು ಪ್ರಗತಿ ಸಾಧಿಸಿದೆ. ತ್ಯಾಜ್ಯವನ್ನು ಪುನರ್‌ಬಳಕೆ ಮಾಡುವ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್ ಬಳಕೆ ಇಂದು ವಿಪರೀತವಾಗಿದ್ದು, ಅವು ಕರಗುವ ಗುಣ ಹೊಂದಿಲ್ಲದ್ದರಿಂದ ಕಸ ದೊಡ್ಡ ಸಮಸ್ಯೆಗಳಾಗಿ ಪಟ್ಟಣ ಪ್ರದೇಶಗಳನ್ನು ಕಾಡುತ್ತಿದೆ. ಭೂಮಿಯ ಮೇಲಷ್ಟೇ ಅಲ್ಲ, ಬಾನಂಗಳದಲ್ಲೂ ಇಂದು ತ್ಯಾಜ್ಯ ವಿಪರೀತವಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳು ಉಪಗ್ರಹಗಳನ್ನು ನಿರಂತರವಾಗಿ ಉಡಾವಣೆ ಮಾಡುತ್ತಿವೆ. ಅವು ನಿರ್ಧಿಷ್ಠ ಅವಧಿಯವರೆಗೆ ಕಾರ್ಯನಿರ್ವಹಿಸಿದ ನಂತರ ತ್ಯಾಜ್ಯವಾಗಿ ಬಾಹ್ಯಾಕಾಶದಲ್ಲಿ ಉಳಿಯುತ್ತಿವೆ ಎಂದರು.


 ನಾಗಾಲೋಟದ ಬದುಕಿನಲ್ಲಿ ಸಂಬಂಧಗಳು ಕ್ಲೀಣಿಸುತ್ತಿವೆ. ಕುಟುಂಬದ ಸ್ವಾಸ್ಥ್ಯ ಕಾಪಾಡುವಲ್ಲಿ ಹೆಣ್ಣಿನಪಾತ್ರ ಮುಖ್ಯ. ಮಾನಸಿಕ ಮತ್ತು ಭೌತಿಕವಾಗಿ ಸದೃಢಳು. ಸಂಸಾರದಲ್ಲಿ ಸಂಸ್ಕಾರ ಬೆಳೆಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸುತ್ತಿದ್ದಾರೆ. ಆದರೆ ಉದ್ಯೋಗಸ್ಥ ಮಹಿಳೆಯರ ಪಾಲು ಕೇವಲ ಶೇ.4ರಷ್ಟು ಮಾತ್ರವಿದೆ. 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜದ ಅಂಕುಡೊಂಕು ಸರಿಪಡಿಸಲು ಶ್ರಮಿಸಿದ ಶರಣರಲ್ಲಿ ಮುಕ್ತಾಯಕ್ಕ ಮುಕ್ತಿಯ ಶಕ್ತಿಯಾಗಿದ್ದಳು. ಕಾಯಕ ಮತ್ತು ದಾಸೋಹಕ್ಕೆ ಅಂದು ವಿಶೇಷ ಮಹತ್ವ ನೀಡಲಾಗಿತ್ತು. ಮುಕ್ತಾಯಕ್ಕನ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಅಕ್ಕಮಹಾದೇವಿ ಸಂಘದ ಕಾರ್ಯದರ್ಶಿ ಹೇಮಲತಾ, ಸಹಕಾರ್ಯದರ್ಶಿ ಭಾರತಿಶಿವರುದ್ರಪ್ಪ, ಸಹಖಜಾಂಚಿ ರೇಖಾ ಉಮಾಶಂಕರ್, ನಾಗಮಣಿಕುಮಾರಸ್ವಾಮಿ, ತಂಡದ ಪುಷ್ಪಾಚಿದಾನಂದ, ಲತಾಶೇಖರ್, ಶಿಲ್ಪಾರಘು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News