ಕೇಂದ್ರೀಕೃತ ಅಡುಗೆ ತಯಾರಿ ಪದ್ದತಿಯನ್ನು ಕೈಬಿಡಲು ಆಗ್ರಹಿಸಿ ವಿಧಾನಸೌಧ ಚಲೋ
ಬಾಗೇಪಲ್ಲಿ, ಜೂ. 10: ಕೇಂದ್ರೀಕೃತ ಅಡುಗೆ ತಯಾರಿ ಪದ್ದತಿಯನ್ನು ಕೈಬಿಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಆಶ್ರಯದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯ ರೆಡ್ಡಿ ತಿಳಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿಕ್ಷಣ ಎಂಬುವುದು ಒಂದು ಮಗುವಿನ ಮೂಲಭೂತ ಹಕ್ಕು ಹಾಗೆಯೇ ಶಿಕ್ಷಣವು ಒಂದು ದೇಶದ ಅಭಿವೃದ್ದಿಗೆ ನೇರವಾಗಿ ಸಂಭಂದಿಸಿದೆ. ಇಂತಹ ಶಿಕ್ಷಣವನ್ನು ಸರಕಾರ ತನ್ನ ಆದ್ಯತೆ ಎಂದು ಭಾವಿಸಿ ಸ್ವಾತಂತ್ರ್ಯ ನಂತರವೂ ಹಲವಾರು ಯೋಜನೆಗಳನ್ನು ರೂಪಿಸಿದೆ. ಇಂತಹ ಯೋಜನೆಗಳಿಂದ ಕೋಟ್ಯಂತರ ಮಕ್ಕಳು ಇಂದು ಸರಕಾರಿ ಶಾಲೆಗಳಲ್ಲಿ ವಿದ್ಯೆ ಕಲಿಯುತ್ತಿದ್ದಾರೆ. ಮಕ್ಕಳ ಹಾಜರಾತಿ ಹೆಚ್ಚಿಸಲು ಮಧ್ಯಾಹ್ನನದ ನಂತರ ಶಾಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಪಾಠದ ಸಾರಾಂಶಗಳನ್ನು ಗ್ರಹಿಸುವಲ್ಲಿ ವೈಫಲ್ಯತೆಗಳಿರುವುದನ್ನು ಗಮನಿಸಿ ಹಲವು ವಿದ್ಯಾರ್ಥಿ ಸಂಘಗಳ ಚಳುವಳಿಗಳ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳ ಒತ್ತಡ ಹಿನ್ನೆಲೆಯಲ್ಲಿ 2001ರಲ್ಲಿ ಸರ್ವೋಚ್ಚ ನ್ಯಾಯಾಲಯ 500 ಗ್ರಾಂ ಪ್ರೋಟಿನ್-ವಿಟಾಮಿನ್‌ಗಳ ಬಿಸಿಯೂದ ಆಹಾರವನ್ನು ಕೊಡಬೇಕು ಎಂದು ಆದೇಶಿಸಿತ್ತು. ಈ ಆದೇಶದ ಮೇರೆಗೆ ಇಡೀ ದೇಶದಲ್ಲಿ ಸುಮಾರು 11ಲಕ್ಷ 43 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ 11 ಕೋಟಿ ಮಕ್ಕಳಿಗೆ ಬಿಸಿಯೂಟ ಯೋಜನೆ ಪ್ರಾರಂಭಿಸಲಾಯಿತು.
2013ರಲ್ಲಿ ಕೇಂದ್ರ ಸರಕಾರ ಬದಲಾವಣೆ ನಂತರ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾಡುತ್ತಿದ್ದ ವೆಚ್ಚವನ್ನು ಕಡಿತ ಮಾಡಲು ಯೋಜನಾ ಆಯೋಗದ ಬದಲು ನೀತಿ ಆಯೋಗವನ್ನು ಕೇಂದ್ರ ಸರಕಾರ ರಚಿಸಿತು. ರಚನೆಯಾದ ಕೂಡಲೇ ನೀತಿ ಆಯೋಗ ಮಾಡಿದ ಮೊದಲ ಕೆಲಸ ಆಹಾರ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಉದ್ಯೋಗ ಖಾತ್ರಿಗಳಿಗೆ ನೀಡುತ್ತಿದ್ದ ಅನುದಾನಗಳನ್ನು ಕಡಿತ ಮಾಡಿತು. ಬಿಸಿಯೂಟ ಯೋಜನೆಗೂ ಕೂಡ ಶೇ.60 ರಷ್ಟು ಕಡಿತ ಮಾಡಿದೆ. ಈಗಾಗಲೇ ಹಲವು ಎನ್‌ಜಿಒಗಳು ಸ್ವಲ್ಪಮಟ್ಟಿಗೆ ದೇಶಾದ್ಯಂತ ಬಿಸಿಯೂಟ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸುತ್ತಿದ್ದಾರೆ. ಆದರೆ ಇಸ್ಕಾನ್, ಅಕ್ಷಯ ಪಾತ್ರೆ, ಅದಮ್ಯಚೇತನ ಸಂಸ್ಥೆಗಳ ಕೆಲಸಗಳ ಪೈಕಿ ಇಸ್ಕಾನ್ ಸರಬರಾಜು ಮಾಡುವ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇರುವುದಿಲ್ಲ ಊಟವನ್ನು ವಾಹನಗಳಲ್ಲಿ ಸರಬರಾಜು ಮಾಡುವುದರಿಂದ ಮಧ್ಯಾಹ್ನ 1-30 ಗಂಟೆಗೆ ಮಕ್ಕಳು ಊಟ ಮಾಡುವ ಸಮಯಕ್ಕೆ ತಣ್ಣಗಾಗುತ್ತದೆ. ಕೇಂದ್ರೀಕೃತ ಅಡುಗೆಯೆಂದರೆ 40 ರಿಂದ 50 ಶಾಲೆಗಳು ಒಂದೇ ಪ್ರದೇಶದಲ್ಲಿ ಅಥವಾ ರಸ್ತೆಯ ಹಾದಿಯಲ್ಲಿ ಬಂದರೆ ಅಷ್ಟು ಶಾಲೆಗಳಿಗೆ ಒಂದೇ ಸ್ಥಳದಿಂದ ಆಹಾರ ಸರಬರಾಜು ಮಾಡಿದರೆ ಈ ಶಾಲೆಗಳ 100 ರಿಂದ 150 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಈ ಯೋಜನೆಯಡಿಯಲ್ಲಿ ಕೆಲಸ ಮಾಡುವ ಲಕ್ಷಾಂತರ ಮಹಿಳೆಯರು ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಕೇಂದ್ರ ಸರಕಾರದ ಈ ನೀತಿಯನ್ನು ಕೈಬಿಡುವಂತೆ ಆಗ್ರಹಿಸಿ ಜೂ.13 ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಸಿಐಟಿಯು ಕಾರ್ಯದರ್ಶಿ ಜಿ.ಮುಸ್ತಾಫ್, ತಾಲೂಕು ಸರಕಾರಿ ಹಾಸ್ಟೆಲ್ ಮತ್ತು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ನಾರಾಯಣ್ ನಾಯ್ಕಿ, ಕಾರ್ಯದರ್ಶಿ ಮುನಿಯಪ್ಪ, ಬಿಸಿಯೂಟ ನೌಕರರ ಸಂಘ ಉಪಾಧ್ಯಕ್ಷೆ ರಾಮಾಂಜನಮ್ಮ, ಕಾರ್ಯದರ್ಶಿ ಗೀತಾ ಮತ್ತಿತರರು ಉಪಸ್ಥಿತರಿದ್ದರು