ಬಾಲಕಿ ಆತ್ಮಹತ್ಯೆ: ಶಿಕ್ಷಕಿಯ ವಿರುದ್ಧ ಅಂಗೈಯಲ್ಲಿ ಡೆತ್ ನೋಟ್
ನಾಗಮಂಗಲ, ಜೂ.10: ಶಾಲಾ ಬಾಲಕಿಯೋರ್ವಳು ತನ್ನ ಸಾವಿಗೆ ಟೀಚರ್ ಕಾರಣವೆಂದು ತನ್ನ ಅಂಗೈ ಮೇಲೆ ಡೆತ್ ನೋಟ್ ಬರೆದುಕೊಂಡು ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸುಭಾಷ್‌ನಗರದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಸುಬಾಷ್‌ನಗರದ ಗುಡಿಸಲಿನಲ್ಲಿ ವಾಸವಿದ್ದ ನಾಗಮ್ಮ ಶ್ರೀನಿವಾಸ್ ದಂಪತಿಯ ಪುತ್ರಿ ಭವಾನಿ ಅಲಿಯಾಸ್ ರಮ್ಯ (13) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಆಕೆ ಪಟ್ಟಣದ ಸಾರಿಮೇಗಲ ಕೊಪ್ಪಲಿನಲ್ಲಿರುವ ಸರಕಾರಿ ಶಾಲೆಯಲ್ಲಿ 7ನೆ ತರಗತಿ ಉತ್ತೀರ್ಣಳಾಗಿ 8ನೆ ತರಗತಿಗೆ ಕೆಎನ್‌ಎಸ್ ಪ್ರೌಢಶಾಲೆಗೆ ದಾಖಲಾಗಿದ್ದಳು. ಎರಡು ದಿನ ಮಾತ್ರ ಶಾಲೆಗೆ ಹೋಗಿದ್ದು ಶನಿವಾರ ತರಗತಿಗೆ ಹೋಗಿರಲಿಲ್ಲ ಎನ್ನಲಾಗಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬಾಲಕಿ ತನ್ನ ಎಡಗೈಯ ಅಂಗೈ ಮೇಲೆ ತನ್ನ ಸಾವಿಗೆ ಟೀಚರ್ ಯಶೋಧಮ್ಮ ಕಾರಣರಾಗಿದ್ದಾರೆ ಎಂದು ಬರೆದುಕೊಂಡು ಮದ್ಯಾಹ್ನ 12.30ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆದರೆ, ಬಾಲಕಿಯ ಸಾವಿಗೆ ಕಾರಣರಾದ ಯಶೋಧಮ್ಮ ಹೆಸರಿನ ಟೀಚರ್ ಕೆಎನ್‌ಎಸ್ ಪ್ರೌಢಶಾಲೆಯಲ್ಲಿ ಯಾರು ಇಲ್ಲ ಎನ್ನಲಾಗಿದ್ದು, ಯಾವ ಶಾಲೆಯ ಟೀಚರ್ ಎಂಬುದು ತನಿಖೆಯಿಂದಲೆ ತಿಳಿಯಬೇಕಿದೆ ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.