×
Ad

ಗೋಲಿಬಾರ್‌ಗೆ ಖಂಡನೆ: ರೈತ ಸಂಘದಿಂದ ಪ್ರತಿಭಟನೆ

Update: 2017-06-10 19:43 IST

ಮಡಿಕೇರಿ ಜೂ.10: ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಪಡಿಸಬೇಕು ಮತ್ತು ರಾಜ್ಯದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಹಾಗೂ ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು.
   

ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಕೊಡಗು ಜಿಲ್ಲಾ ರೈತ ಸಂಘ ಅಧ್ಯಕ್ಷರಾದ ಮನುಸೋಮಯ್ಯ ನೇತೃತ್ವದಲ್ಲಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಮಧ್ಯ ಪ್ರದೇಶದ ಮನ್ಸೂರ್ ಜಿಲ್ಲೆಯಲ್ಲಿ ರೈತರ ಸಾವಿಗೆ ಕಾರಣರಾದ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ರವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.
  ಕೊಡಗು ಜಿಲ್ಲಾ ರೈತ ಸಂಘ ಅಧ್ಯಕ್ಷರಾದ ಮನು ಸೋಮಯ್ಯ, ರೈತ ಸಂಘದ ಸಂಚಾಲಕರಾದ ಚಿಮ್ಮಂಗಡ ಗಣೇಶ್,  ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
    ರೈತ ಸಂಘದ ಕಾರ್ಯದರ್ಶಿ ಕಳ್ಳಿಚಂಡ ಧನು, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್, ಅಶೋಕ್ ಮಾತನಾಡಿದರು.

ರೈತರ ಸಾಲ ಮನ್ನಾ ಮಾಡಲು ಸರ್ಕಾರಗಳು ಮೀನಾ-ಮೇಷ ಎಣಿಸುತ್ತಿವೆ. ಆದುದರಿಂದ ಸರ್ಕಾರ ಕೂಡಲೇ ರೈತರ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಈ ಸಂದರ್ಭ ಪ್ರತಿಭಟನಾಕಾರರು ಒತ್ತಾಯಿಸಿದರು. ರೈತರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಚಿಮಾಡ ಕಾಶಿ ಚಿಟ್ಟಿಯಪ್ಪ, ಚೋನಿರ ಸತ್ಯಾ, ರಘು ಕರುಂಬಯ್ಯ, ಫ್ಯಾನ್ಸಿ ಕರುಂಬಯ್ಯ, ಸಬೀತ ಭೀಮಯ್ಯ, ಅರಮಣಮಾಡ ವಿನು, ತೀತಿರ ಸೋಮಯ್ಯ, ಕೋಳೆರ ರೆನ್ನಾ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News