×
Ad

ಶಿವಮೊಗ್ಗ : ಅಪರಿಚಿತನ ಯುವಕನ ಬರ್ಬರ ಹತ್ಯೆ

Update: 2017-06-10 21:20 IST

ಶಿವಮೊಗ್ಗ, ಜೂ. 10: ಅಪರಿಚಿತ ಯುವಕನ ಹತ್ಯೆ ನಡೆಸಿ ಆತನ ಶವವನ್ನು ಕೆರೆಯಲ್ಲಿ ಎಸೆದು ಹೋಗಿರುವ ಪ್ರಕರಣವೊಂದು ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ಬಳಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕೆರೆಯಲ್ಲಿ ಶವ ಗೋಚರಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪಂಚನಾಮೆ ನಡೆಸಿ ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ತೆಯಾಗದ ವಿವರ: ಕೊಲೆಗೀಡಾದ ಯುವಕನ ಹೆಸರು, ವಿಳಾಸ ಮತ್ತಿತರ ಯಾವುದೇ ವಿವರಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಶವವು ಭಾಗಶಃ ಕೊಳೆತ ಸ್ಥಿತಿಯಲ್ಲಿ ಲಭ್ಯವಾಗಿದೆ. ಇದರಿಂದ ಮೃತದೇಹದ ಚಹರೆ ಪತ್ತೆ ಹಚ್ಚುವುದು ಕಷ್ಟಕರವಾಗಿ ಪರಿಣಮಿಸಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಮೃತದೇಹದ ಹಿಂಬದಿಗೆ ಸುಮಾರು ಮೂರು ಅಡಿ ಉದ್ದದ ಕಲ್ಲು ಕಂಬವನ್ನು ಹಗ್ಗದಿಂದ ಕಟ್ಟಿ ಕೆರೆಯ ನೀರಿಗೆ ಎಸೆದಿರುವುದು ಕಂಡುಬಂದಿದೆ. ಆದರೆ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರು ಕಡಿಮೆಯಿದ್ದ ಕಾರಣದಿಂದ, ಶವ ನೀರಿನಿಂದ ಹೊರಗೆ ಗೋಚರವಾಗಿದೆ.

ಹತ್ಯೆಯಾದ ಯುವಕನ್ಯಾರು ಎಂಬುವುದರ ಮಾಹಿತಿ ಲಭ್ಯವಾದ ನಂತರ ಹಂತಕರು ಯಾರು? ಹತ್ಯೆ ಮಾಡಿದ್ದೇಕೆ? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News