’ರೈತರಿಗೆ ಪರಿಹಾರ ನೀಡಲು ಹಣದ ಕೊರತೆಯಿಲ್ಲ’ : ಸಚಿವ ಕಾಗೋಡು ತಿಮ್ಮಪ್ಪ ಸ್ಪಷ್ಟನೆ
ಶಿವಮೊಗ್ಗ, ಜೂ. 10: ರಾಜ್ಯದ ಕೆಲವೆಡೆ ರೈತರಿಗೆ 1 ರೂ. ಸೇರಿದಂತೆ ಕಡಿಮೆ ಮೊತ್ತದ ಪರಿಹಾರ ಬ್ಯಾಂಕ್ ಖಾತೆಗೆ ಜಮೆಯಾಗಿರುವ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪರವರು, ’ಇದೊಂದು ಪ್ರಯೋಗಾತ್ಮಕ ಹಂತವಾಗಿದೆ. ಉದ್ದೇಶಪೂರ್ವಕವಲ್ಲ. ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಬೆಳೆ ಪರಿಹಾರ ಮೊತ್ತ ಜಮೆ ಮಾಡಲಾಗುತ್ತಿದೆ. ಪ್ರಯೋಗಾತ್ಮಕವಾಗಿ ಕೆಲ ರೈತರಿಗೆ ಕಡಿಮೆ ಪ್ರಮಾಣದ ಮೊತ್ತ ಸಂದಾಯವಾಗಿದೆ. ಇದು ದೊಡ್ಡ ವಿಷಯವಲ್ಲ ಎಂದರು.
ಬೆಳೆ ಕಳೆದುಕೊಂಡ ಎಲ್ಲ ರೈತರಿಗೂ ನಿಯಮಾನುಸಾರ ಸೂಕ್ತ ಪರಿಹಾರ ಮೊತ್ತ ನೀಡಲಾಗುವುದು. ಈಗಾಗಲೇ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಮಾಡಲಾಗುತ್ತಿದೆ. ರೈತರಿಗೆ ಪರಿಹಾರ ನೀಡಲು ಸಾಕಷ್ಟು ಹಣವಿದ್ದು, ಉಳಿದ ರೈತರಿಗೆ ಪರಿಹಾರ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.