ಜೂ.12: ಬಯಲು ಸೀಮೆಗೆ ಶಾಶ್ವತ ನೀರಾವರಿಗಾಗಿ ರಾಜ್ಯ ಬಂದ್
ತುಮಕೂರು, ಜೂ.10: ಬಯಲುಸೀಮೆ ಪ್ರದೇಶಗಳಾದ ತುಮಕೂರು ,ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳ ಶಾಶ್ವತ ನೀರಾವರಿ ಯೋಜನೆಗಳಿಗೆ ಒತ್ತಾಯಿಸಿ ಜೂ.12 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಕನ್ನಡ ಸೇನೆಯ ಅಧ್ಯಕ್ಷ ಧನಿಯಾಕುಮಾರ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಈ ಬಗ್ಗೆ ಕಳೆದ 2 ದಶಕಗಳಿಂದಲೂ ಹೋರಾಟಗಳು ನಡೆಯುತ್ತಿದ್ದರೂ ಸರಕಾರಗಳು ಸಂಬಂಧಿಸಿದ ಇಲಾಖೆಗಳು, ಉನ್ನತ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ಹೋರಾಟದ ನೇತೃತ್ವವನ್ನು ಕನ್ನಡ ಚಳುವಳಿಯ ನಾಯಕ ವಾಟಳ್ ನಾಗರಾಜು, ತುಮಕೂರು ಜಿಲ್ಲೆಯ ನೀರಾವರಿ ತಜ್ಞ ಜಿ.ಎಸ್. ಪರಮ ಶಿವಯ್ಯನವರ ವರದಿ ಆಧಾರಿತ ನೀರಾವರಿ ಯೋಜನೆ ಜಾರಿಗೆ ಸರಕಾರದ ಗಮನ ಸೆಳೆದಿದ್ದರೂ ಇದುವರೆಗೂ ಯೋಜನೆ ಜಾರಿಯಾಗಿಲ್ಲ. ಜನರನ್ನು ಓಲೈಸಿ ಓಟು ಪಡೆಯಲು ಯೋಜನೆಗಳನ್ನು ಜಾರಿಗೊಳಿಸದೆ ನೈಜ ಯೋಜನೆಗಳಿಗೆ ಒತ್ತು ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಬಯಲು ಸೀಮೆ ಜಿಲ್ಲೆಗಳ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು ಇದನ್ನು ತೆಗೆಸಲು ಸರಕಾರ ಕ್ರಮ ಕೈಗೊಳ್ಳಬೇಕು. ಗಡಿಭಾಗದ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಿದಂತೆ ನಮ್ಮ ರಜಿಲ್ಲೆಯಲ್ಲೂ ನಿರ್ಮಿಸಬೇಕು. ಬೆಟ್ಟ ಗುಡ್ಡಗಳಿಂದ ಹರಿಯುವ ನೀರಿನ ತೊರೆಗಳ ರಕ್ಷಣೆಗೆ ನೀಲಿ ನಕ್ಷೆ ತಯಾರಿಸಬೇಕು ಎಂದು ಒತ್ತಾಯಿಸಿದ ಅವರು, ಪ್ರಸಕ್ತ ವಿಧಾನಸಭಾ ಅಧಿವೇಶನದಲ್ಲಿ ಬಯಲು ಸೀಮೆಯ ಬರಪೀಡಿತ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಬಗ್ಗೆ ವಿಷಯ ಪ್ರಸ್ತಾಪಿಸಿ ಚರ್ಚಿಸುವಂತೆ ಆಗ್ರಹಪಡಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಕರವೇಯ ಟಿ.ಇ.ರಘುರಾಮ್, ಡಿಎಸ್‌ಎಸ್‌ನ ಪಿ.ಎನ್.ರಾಮಯ್ಯ ಮುಂತಾದವರು ಮಾತನಾಡಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವೆಂಕಟೇಶ್, ಹರೀಶ್, ಸುದೀಪ್, ಭಾಸ್ಕರ್, ಪ್ರಸನ್ನ, ಶಂಕರ್, ಎ.ನಾಗೇಶ್, ಆರ್.ಎನ್.ವೆಂಕಟಾಚಲ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.