ಇಂದ್ರಕುಮಾರ್‌ಗೆ ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ
ಮಂಡ್ಯ, ಜೂ.10: ನಗರದ ಕಲಾಮಂದಿರದಲ್ಲಿ ಶನಿವಾರ ಸಂಜೆ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ನಡೆದ ಸಮಾರಂಭದಲ್ಲಿ 2016ನೆ ಸಾಲಿನ ಡಾ.ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಣದ ಕಡಲುಕಥಾಸಂಕಲನದ ರಚನೆಕಾರ ದಾವಣಗೆರೆಯ ಎಚ್.ಬಿ.ಇಂದ್ರಕುಮಾರ್ ಅವರಿಗೆ 25 ಸಾವಿರ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿಪತ್ರವನ್ನೊಳಗೊಂಡ ಪ್ರಶಸ್ತಿಯನ್ನು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಡಾ.ಗಿರೀಶ್ ಕಾಸರವಳ್ಳಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಗಿರೀಶ್ ಕಾಸರವಳ್ಳಿ ಸಾಹಿತ್ಯ ಮತ್ತು ಸಿನಿಮಾ ನಡುವಿನ ಸಂಬಂಧವನ್ನು ವಿವರಿಸುತ್ತಾ, ಕನ್ನಡಿಯಲ್ಲಿನ ಪ್ರತಿಫಲನದ ರೀತಿ ಸಾಹಿತ್ಯ ಕೃತಿಯು ಸಿನಿಮಾದಲ್ಲಿ ಪ್ರತಿಫಲನವಾಗುತ್ತದೆ ಎಂದರು.
ಸಾಹಿತ್ಯ ಕೃತಿಗೆ ನಿಷ್ಟವಾಗಿ ದೃಶ್ಯರೂಪುಕೊಟ್ಟು ಸಿನಿಮಾ ಮಾಡುವುದು ಒಂದು ಕ್ರಮವಾದರೆ, ಆ ಕೃತಿಯ ಜತೆ ಸಂವಾದ ನಡೆಸಿ ಸಿನಿಮಾ ಮೂಲಕ ಮತ್ತೊಂದು ಕೃತಿ ಸೃಷ್ಟಿಸುವುದು ಮತ್ತೊಂದು ವಿಧಾನವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಬೆಸಗರಹಳ್ಳಿ ರಾಮಣ್ಣರ ವ್ಯಕ್ತಿತ್ವ ಮತ್ತು ಅವರ ಕತೆಗಳ ಕುರಿತು ಮಾತನಾಡಿದ ಸಂಸ್ಕೃತಿ ಚಿಂತಕ ಡಾ.ರಾಜೇಂದ್ರಚೆನ್ನಿ, ರಾಮಣ್ಣ ಅವರು ಕತೆಗಳು ಗ್ರಾಮೀಣ ಸಮಾಜದ ವಾಸ್ತವ ಪರಿಸ್ಥಿತಿಯನ್ನು ಹೇಳುತ್ತಲೇ, ಸಮಾಜ ಉತ್ತಮವಾಗಿರಬೇಕು ಎಂಬ ಆಶಯವನ್ನು ಹೊಂದಿವೆ ಎಂದರು.
ಗ್ರಾಮೀಣ ಸಮಾಜದಲ್ಲಿರುವ ಜಾತಿ ಪದ್ಧತಿ, ಜೀತ ಪದ್ಧತಿ, ಮಾನವೀಯತೆ, ಶೋಷಣೆ, ಅಂತಃಕರಣ, ಮೌಲ್ಯಗಳನ್ನು ಡಾ.ರಾಮಣ್ಣ ಅವರು ತಮ್ಮ ಕತೆಗಳ ಮೂಲಕ ದರ್ಶನಮಾಡಿದ್ದಾರೆ. ಭಾಷೆಗೆ ಹೊಸ ಜೀವಂತಿಕೆ, ಸಾಮಾಜಿಕ ಮೌಲ್ಯ ಕೊನೆಯವರೆಗೂ ಉಳಿಯುವಂತೆ ತಮ್ಮ ಕತೆಗಳಲ್ಲಿ ರಾಮಣ್ಣ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಲಯದ ಪ್ರಾಧ್ಯಾಪಕಿ, ಲೇಖಕಿ ಡಾ.ಕವಿತಾ ರೈ ಪ್ರಶಸ್ತಿ ಪುರಸ್ಕೃತಿ ಕೃತಿ ಕುರಿತು ಮಾತನಾಡಿದರು. ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಪ್ರತಿಷ್ಠಾನದ ಅಜೀವ ಪೋಷಕಿ ಡಿ.ಪಿ.ರಾಜಮ್ಮ ರಾಮಣ್ಣ, ಕಾರ್ಯದರ್ಶಿ ಎ.ಎಂ.ರವಿ, ರಾಮಣ್ಣ ಅವರ ಪುತ್ರ ಬಿ.ಆರ್.ರವಿಕಾಂತೇಗೌಡ ಉಪಸ್ಥಿತರಿದ್ದರು. ಇದೇ ವೇಳೆ ಧಾರವಾಢದ ಉಸ್ತಾದ್ ಹಫೀದ್ ಬಾಳೇಖಾನ್ ಅವರಿಂದ ಭಾವಗಾಯನ ಮತ್ತು ಸಿತಾರ್ ವಾದನವಿತ್ತು.