×
Ad

ನಾನು ಪ್ರಚಾರಪ್ರಿಯನಲ್ಲ, ನನ್ನ ರಾಜಕೀಯ ಜೀವನದಲ್ಲಿ ಯಾರಿಂದಲೂ ಐದು ಪೈಸೆ ಪಡೆದಿಲ್ಲ: ಕಾಗೋಡು ತಿಮ್ಮಪ್ಪ

Update: 2017-06-11 15:18 IST

ಸಾಗರ,ಜೂ.11 : ನಾನು ಪ್ರಚಾರಪ್ರಿಯನಲ್ಲ. ಕ್ಷೇತ್ರವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಜನರ ಎದುರು ಹೇಳಿ, ಪ್ರಚಾರ ಮಾಡಿಕೊಂಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾರಿಂದಲೂ ಐದು ಪೈಸೆ ಪಡೆದಿಲ್ಲ. ನಮ್ಮ ಜನರ ಸಮಸ್ಯೆ ಹೇಗೆ ಪರಿಹಾರ ಮಾಡಬೇಕು ಎನ್ನುವುದರ ಬಗ್ಗೆ ಮಾತ್ರ ನಾನು ಹೆಚ್ಚಿನ ಗಮನ ಕೊಟ್ಟವನು ಎಂದು ಸಚಿವ ಕಾಗೋಡು ತಿಮ್ಮಪ್ಪ ಖಾರವಾಗಿ ನುಡಿದಿದ್ದಾರೆ.

ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಶನಿವಾರ ಕರೆಯಲಾಗಿದ್ದ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೇನೆ, ಮೋಸ ಮಾಡಿದ್ದೇನೆ ಎಂಬ ದೂರು ಬಂದರೆ ನನಗೆ ಶಿಕ್ಷೆ ಕೊಡಿ ಎಂದು ಭಾವೋದ್ವೇಗದಿಂದ ಕಾಗೋಡು ನುಡಿದರು.

ಭೂಮಿ ನನಗೆ ತಾಯಿ ಇದ್ದಂತೆ. ಭೂಹೀನರಿಗೆ ಭೂಮಿ ಹಕ್ಕು ಕೊಡಿಸಲು ನಾನು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಭೂಮಿ ಕಾಯ್ದೆ ಜಾರಿಗೆ ತಂದು, ಭೂಹೀನರಿಗೆ ಭೂಮಿ ಕೊಡಿಸಿದ್ದಕ್ಕೆ ಎಲ್ಲರೂ ಸೇರಿ 1978ರಲ್ಲಿ ನನ್ನನ್ನು ಸೋಲಿಸಿದರು. ಆದರೂ ನಾನು ಎದೆಗುಂದಿಲ್ಲ. ಇಂದಿಗೂ ಭೂಮಿಯ ಹಕ್ಕನ್ನು ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಲೇ ಬರುತ್ತಿದ್ದೇನೆ ಎಂದರು.

ಎಸ್.ಎಂ.ಕೃಷ್ಣ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಓದಿಕೊಂಡು ಬಂದವರು. ಅವರ ಹಿಂದೆ ದೊಡ್ಡ ಸಮುದಾಯವಿದೆ. ಅವರು ಕಾಂಗ್ರೆಸ್ ಬಿಟ್ಟು ಹೋದರು. ನನ್ನ ಹಿಂದೆ ಯಾರೂ ಇಲ್ಲ ಎಂದು ಕೊಳ್ಳಬೇಡಿ. ಆದರೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನನ್ನ ರಾಜಕೀಯ ಗುರುಗಳಾಗಿರುವ ಡಾ. ರಾಮ ಮನೋಹರ ಲೋಹಿಯಾ, ಶಾಂತಾವೇರಿ ಗೋಪಾಲಗೌಡರು ನನಗೆ ಕಲಿಸಿಲ್ಲ. ಮುಂದೆಯೂ ನಾನು ಕಲಿಯುವುದಿಲ್ಲ. ರಾಜಕೀಯದಲ್ಲಿ ಸಾಕಷ್ಟು ಹೊಡೆತ ತಿಂದಿದ್ದೇನೆ. ಯಾರ ವಿರುದ್ದವೂ ರಾಜಕೀಯವಾಗಿ ನಾನು ತಿರುಗಿ ಬಿದ್ದಿಲ್ಲ ಎಂದರು.

ಪ್ರಸ್ತುತ ಕಾಂಗ್ರೆಸ್ ಪಕ್ಷದ ಎದುರು ಸವಾಲುಗಳಿವೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತರುತ್ತಿರುವ ಜನಪರ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಹಿಂದಿನ ಸರಕಾರ ಕಂದಾಯ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಸರಿಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ನಮ್ಮ ಪಕ್ಷದಲ್ಲಿಯೇ ಸಂಪೂರ್ಣ ಸಹಕಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕಾಗೋಡು, ಅರಣ್ಯಹಕ್ಕು ಕಾಯ್ದೆ, 94 ಸಿ. ಕಾಯ್ದೆಯನ್ನು ತ್ವರಿತವಾಗಿ ಅನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಆರ್.ಎಸ್.ಎಸ್. ಕೇಡರ್ ಪಕ್ಷವಾಗಿದೆ. ಅಲ್ಲಿ ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ತತ್ವಸಿದ್ದಾಂತದಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಅನೇಕ ಜನಪರ ಕಾಯ್ದೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷವೆ ಹೊರತು ನರೇಂದ್ರ ಮೋದಿಯಲ್ಲ. ನಮ್ಮ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿದರೆ ಸಾಕು ಜನರು ಕೈಮುಗಿದು ನಮಗೆ ಮತ ಕೊಡುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಮುಂದಿನ ಚುನಾವಣೆಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ, ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಉಷಾ ಎನ್., ಉಪಾಧ್ಯಕ್ಷೆ ಮರಿಯಾ ಲೀಮಾ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಲಗೋಡು ರತ್ನಾಕರ್, ಕಾಗೋಡು ಅಣ್ಣಪ್ಪ, ಅನಿತಾಕುಮಾರಿ, ಪ್ರಮುಖರಾದ ಜಿ.ಕೆ.ಭೈರಪ್ಪ, ಎಲ್.ಚಂದ್ರಪ್ಪ, ಈಳಿ ನಾರಾಯಣಪ್ಪ, ವೀಣಾ ಬೆಳೆಯೂರು, ನಂದಾ ಗೊಜನೂರು ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News